ನಗರಕ್ಕೆ ಸೌಲಭ್ಯ ಒದಗಿಸಲಾಗಿಲ್ಲ-ಕ್ಷಮೆ ಇರಲಿ: ಸಚಿವ ಕಟ್ಟಾ
ಬೆಂಗಳೂರು, ಸೋಮವಾರ, 28 ಡಿಸೆಂಬರ್ 2009( 13:22 IST )
NRB
'ನಗರದ ಜನತೆಗೆ ಮೂಲ ಸೌಲಭ್ಯ ಒದಗಿಸುವಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮಿಂದ ತಪ್ಪಾಗಿದೆ. ಆಡಳಿತ ಪಕ್ಷದ ಆಂತರಿಕ ಕಲಹದಿಂದ ಹೀಗಾಗಿದೆ' ಎಂದು ಬೆಂಗಳೂರು ಉತ್ತರ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಇದಕ್ಕಾಗಿ ನಗರದ ನಿವಾಸಿಗಳ ಕ್ಷಮೆ ಕೋರಿರುವ ಅವರು, ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗುವ ಭರವಸೆಯನ್ನು ನೀಡಿದ್ದಾರೆ. ಯಲಹಂಕಾದ 5ನೇ ಹಂತದಲ್ಲಿ ನಿರ್ಮಿಸಿದ ಬಿಎಂಟಿಸಿ ನಿಲ್ದಾಣ ಹಾಗೂ 29 ಹೊಸ ಮಾರ್ಗಗಳಿಗೆ ಚಾಲನೆ ನೀಡಿ ಸಚಿವ ಕಟ್ಟಾ ಮಾತನಾಡಿದರು.
ಪ್ರಜೆಗಳಿಗೆ ತೊಂದರೆಯಾದರೆ ಸರ್ಕಾರಕ್ಕೇ ಅಪಾಯ ಎಂಬ ಅರಿವಿದೆ. ಪಕ್ಷದೊಳಗಿನ ಕಚ್ಚಾಟ ನಿಲ್ಲಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು, ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದ 800 ರಸ್ತೆಗಳನ್ನು ಅಭಿವೃದ್ದಿಪಡಿಸಲು ತೀರ್ಮಾನಿಸಲಾಗಿದೆ ಎಂದು ನಾಯ್ಡು ಇದೇ ಸಂದರ್ಭದಲ್ಲಿ ತಿಳಿಸಿದರು.