ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡಿರುವುದನ್ನು ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿರುವ ನಡುವೆಯೇ ಮಾಜಿ ಪ್ರೇಯಸಿ ಎಂದು ಹೇಳಲಾದ ನರ್ಸ್ ಜಯಲಕ್ಷ್ಮೀ, ಕಳಂಕಿತ ಸಚಿವ ರೇಣುಕಾಚಾರ್ಯರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿದ್ದಾರೆ.
ಸೋಮವಾರ ಟಿವಿ9 ಜೊತೆ ಮಾತನಾಡಿದ ನರ್ಸ್ ಜಯಲಕ್ಷ್ಮೀ, ರೇಣುಕಾಚಾರ್ಯ ಅವರನ್ನು ಸಂಪುಟದಿಂದ ಕೈಬಿಡುವವರೆಗೆ ಹೋರಾಟ ನಡೆಸುವುದಲ್ಲದೇ, ರಾಜ್ಯಪಾಲರಿಗೂ ದೂರು ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಭಂಡತನ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರೇಣುಕಾಚಾರ್ಯ ವಿರುದ್ಧ ಹೋರಾಟ ಮುಂದುವರಿಸುವುದಾಗಿ ತಿಳಿಸಿರುವ ಜಯಲಕ್ಷ್ಮೀ, ತಮಗೆ 20ಕ್ಕೂ ಹೆಚ್ಚು ಮಹಿಳಾಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಆ ನಿಟ್ಟಿನಲ್ಲಿ ಸಂಘಟನೆಗಳೊಂದಿಗೆ ಚರ್ಚಿಸಿ ಶೀಘ್ರವೇ ಹೋರಾಟದ ರೂಪುರೇಶೆ ನಿರ್ಧರಿಸುವುದಾಗಿ ಹೇಳಿದರು.
ಸಚಿವ ಸಂಪುಟದಲ್ಲಿದ್ದ ಏಕೈಕ ಮಹಿಳಾ ಮಂತ್ರಿಯಾದ ಶೋಭಾ ಕರಂದ್ಲಾಜೆ ಅವರನ್ನು ಕೈಬಿಡಿ ಎಂದಾಗ ಏಕಾಏಕಿ ನಿರ್ಧಾರ ಕೈಗೊಂಡು ತಲೆದಂಡ ತೆಗೆದುಕೊಂಡರು. ಅವರೇನು ತಪ್ಪು ಮಾಡಿದ್ದರು ಎಂದು ಪ್ರಶ್ನಿಸಿದ ಅವರು, ಕಳಂಕ ಹೊತ್ತ ರೇಣುಕಾಚಾರ್ಯ ಬ್ಲ್ಯಾಕ್‌ಮೇಲ್‌ಗೆ ಮಣಿದ ಮುಖ್ಯಮಂತ್ರಿಗಳು ದಿಢೀರನೆ ಸಚಿವಗಿರಿ ದಯಪಾಲಿಸಿದರು ಇದೆಂಥಾ ಪ್ರಜಾಪ್ರಭುತ್ವ ಎಂದು ದೂರಿದರು.