ರಾಜ್ಯದಲ್ಲಿ ತಲೆ ಎತ್ತಿರುವ ಕೋಮುವಾದಿ ಶಕ್ತಿಗಳ ಹುಟ್ಟಡಗಿಸಲು ಕಾಂಗ್ರೆಸ್ ಮಂದಾಗಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ನಗರದಲ್ಲಿ ಕೆಪಿಸಿಸಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್‌ನ 125 ಸಂಸ್ಥಾಪನಾ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಬಡತನ, ನಿರುದ್ಯೋಗ ಹಾಗೂ ಆರ್ಥಿಕ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ ಪಕ್ಷದೊಳಗಿನ ಆಂತರಿಕ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದೆ ಎಂದು ದೂರಿದರು.
ಆಡಳಿತ ನಡೆಸಲು ವಿಫಲವಾಗಿರುವ ಇಂತಹ ಬಿಜೆಪಿ ಸರ್ಕಾರವನ್ನು ತೊಲಗಿಸಿ ಕೈ ಪಕ್ಷವನ್ನು ಬಲಪಡಿಸಬೇಕೆಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಹಳ್ಳಿಯಿಂದ ದಿಲ್ಲಿಯವರೆಗೂ ಬಲಪಡಿಸಲಾಗುವುದು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕೆಂದರು.