ಸಚಿವ ರೇಣುಕಾಚಾರ್ಯ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದರಿಂದ, ಭುಗಿಲೆದ್ದ ಬಿಜೆಪಿ ಒಳ ಭಿನ್ನಮತದ ಬೆಂಕಿಗೆ ಮತ್ತೆ ತುಪ್ಪ ಸುರಿದಂತಾಗಿದೆ ಎಂದು ಭಾರತ ವಿಕಾಸ ಸಂಗಮ್ ನಾಯಕ, ಬಿಜೆಪಿಯ ಮಾಜಿ ಮುಖಂಡ ಕೆ.ಎನ್.ಗೋವಿಂದಾಚಾರ್ಯ ಟೀಕಿಸಿದ್ದಾರೆ
ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೆ ಗಣಿದಣಿಗಳಿಗೆ ಶರಣಾಗಿದ್ದು, ಇದೀಗ ತಮ್ಮ ಖುರ್ಚಿಯನ್ನು ಉಳಿಸಿಕೊಳ್ಳಲು, ಕಳಂಕಿತ ವ್ಯಕ್ತಿಯನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಸೇರಿದಂತೆ ಮೂವರು ಸಚಿವರ ನೇತೃತ್ವದಲ್ಲಿ, ಭಿನ್ನಮತ ಚಟುವಟಿಕೆಗಳು ನಡೆಯುತ್ತಿವೆ.ಮುಖ್ಯಮಂತ್ರಿಗಳು ತಮ್ಮ ಅಧಿಕಾರ ದಾಹಕ್ಕಾಗಿ, ಸ್ವ-ಪ್ರತಿಷ್ಠೆ ಹಾಗೂ ನೈತಿಕ ಮೌಲ್ಯಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ.ಅಧಿಕಾರವೆನ್ನುವುದು ನಮ್ಮ ನೆರಳಿದ್ದಂತೆ ಎನ್ನುವುದನ್ನು ಅರಿಯಬೇಕಾಗಿದೆ ಎಂದು ಕಿಡಿಕಾರಿದರು.
ನಾವು ನೆರಳನ್ನು ಹಿಂಬಾಲಿಸಬಾರದು ಎನ್ನುವ ಅರಿವು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿರಬೇಕಿತ್ತು. ಎಲ್ಲಾ ಪಕ್ಷಗಳು ಅಧಿಕಾರಕ್ಕಾಗಿ ಹಸಿದ ತೋಳಗಳಂತಾಗಿವೆ.ಇದರಿಂದ ಬಿಜೆಪಿ ಹೊರತಾಗಿಲ್ಲ ಎಂದು ಗೋವಿಂದಾಚಾರ್ಯ ಅಸಮಧಾನ ವ್ಯಕ್ತಪಡಿಸಿದರು.