ನೈಸ್ ವಿವಾದ ಭುಗಿಲೇಳಲು ನಾವು ಕಾರಣರಲ್ಲ. ಅಂದು ಅಧಿಕಾರದಲ್ಲಿದ್ದ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ನಂತರ ಮಾತನಾಡಿದ ಅವರು, ಬಿಎಂಐಸಿ ಯೋಜನೆಯಲ್ಲಿ ಯಾವುದೇ ವಿವಾದಗಳು ಉದ್ಭವವಾದರೆ ಅದನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಬೇಕು ಎಂಬ ಷರತ್ತಿಗೆ ಒಪ್ಪಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ಕೂಡ ಇವರೇ ಎಂದು ದೂರಿದರು.
ತಮ್ಮ ಅಧಿಕಾರವಧಿಯಲ್ಲಿ ರೈತರಿಗೆ ಆಗಿರುವ ಅನ್ಯಾಯವನ್ನು ಮುಚ್ಚಿಹಾಕಿಕೊಳ್ಳಲು ಮಾಜಿ ಪ್ರದಾನಿ ದೇವೇಗೌಡರು ನಾಟಕ ಆಡುತ್ತಿದ್ದಾರೆ. ರೈತರ ಅಭಿವೃದ್ಧಿಗೂ ಅಡ್ಡಗಾಲು ಹಾಕುತ್ತಿದ್ದ ಅಪ್ಪ-ಮಕ್ಕಳು ಇದೀಗ ರೈತರೊಂದಿಗೆ ಕೈಜೋಡಿಸಿ ಸರ್ಕಾರ ಪತನವಾಗುವವರೆಗೂ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ ಎಂದು ಕಿಡಿಕಾರಿದರು.
ಅವರು ಹಿರಿಯ ರಾಜಕಾರಣಿ, ಸರ್ಕಾರ ಪತನವಾಗುವವರೆಗೂ ಹೋರಾಡಲಿ.ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದರು.