ಬನ್ನಂಜೆ, ಶೆಟ್ಟಿ, ಇಸುಬು ವಿರುದ್ಧ 'ರೆಡ್‌ಕಾರ್ನರ್' ಜಾರಿ
ಮಂಗಳೂರು, ಶನಿವಾರ, 9 ಜನವರಿ 2010( 12:27 IST )
ಕರಾವಳಿ ಮೂಲದ ಭೂಗತ ಪಾತಕಿಗಳಾದ ಬನ್ನಂಜೆ ರಾಜಾ, ಕೊರಗ ವಿಶ್ವನಾಥ ಶೆಟ್ಟಿ ಮತ್ತು ಮಾಡೂರು ಇಸುಬು ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿರುವುದಾಗಿ ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರು ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬನ್ನಂಜೆ ರಾಜಾ ಈಗಾಗಲೇ ದುಬೈನಲ್ಲಿ ಬಂಧಿತನಾಗಿದ್ದು, ಆತನನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಕರಾವಳಿಯಲ್ಲಿ ಕೋಮು ವೈಷಮ್ಯದ ಕಿಚ್ಚು ಹಚ್ಚಲು ಹಿಂದೆಯೂ ಭೂಗತ ಮಾಫಿಯಾಗಳ ಕೈವಾಡ ಇರುವುದನ್ನು ಪೊಲೀಸ್ ಇಲಾಖೆ ಪತ್ತೆ ಮಾಡಿದೆ, ಆದರೆ ಆ ಪ್ರಯತ್ನ ಇನ್ನು ಮುಂದೆ ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಭೂಗತ ಪಾತಕಿಗಳನ್ನೊಳಗೊಂಡ ಸಂಘಟಿತ ಅಪರಾಧಗಳಲ್ಲಿ 1992ರಿಂದೀಚೆಗೆ 347 ಆರೋಪಿಗಳಿದ್ದು, ಅದರಲ್ಲಿ 301 ಮಂದಿಯನ್ನು ಬಂಧಿಸಲಾಗಿದೆ. 46ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೊಸೂರು ವಿವರಿಸಿದ್ದಾರೆ.