ನೈಸ್ ವಿರುದ್ಧದ ತಮ್ಮ ಹೋರಾಟ ವ್ಯಕ್ತಿಗತ ದ್ವೇಷದಿಂದ ಕೂಡಿಲ್ಲ. ರೈತರಿಗೆ ಅನ್ಯಾಯವಾಗುವುದನ್ನು ಸಹಿಸಲಾಗದೆ ಹೋರಾಟಕ್ಕೆ ಧುಮುಕಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಕೆಂಗೇರಿಯ ತಿಪ್ಪೂರು ಸಮೀಪ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಾಥ್ ನೀಡಿ ಮಾತನಾಡಿದ ಅವರು, ರೈತರ ಗೋಳನ್ನು ನೋಡಲಾಗದೆ ನಾನು ಹೋರಾಟದಲ್ಲಿ ಭಾಗಿಯಾಗಲು ತೀರ್ಮಾನಿಸಿರುವುದಾಗಿ ಹೇಳಿದರು.
ರೈತರ ಫಲವತ್ತಾದ ಭೂಮಿಯನ್ನು ನೈಸ್ ರಸ್ತೆಗೆ ಸ್ವಾಧೀನಪಡಿಸಿಕೊಂಡರೆ ಮುಂದಿನ ಪೀಳಿಗೆಗೆ ಜಮೀನು ಇಲ್ಲದಂತಾಗುತ್ತದೆ ಎಂದು ಗೌಡರು ಆತಂಕ ವ್ಯಕ್ತಪಡಿಸಿದರು. ನನ್ನ ಕೊನೆಯ ಉಸಿರು ಇರುವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ಅಧಿಕಾರಕ್ಕಾಗಿ ಈ ಹೋರಾಟವಲ್ಲ, ರೈತನ ಮಗನಾಗಿ ಹುಟ್ಟಿ, ರೈತರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೋರಾಟಕ್ಕೆ ಇಳಿದಿರುವುದಾಗಿ ಗುಡುಗಿದರು.
ರೈತರ ಭೂಮಿಯನ್ನು ನೈಸ್ ರಸ್ತೆಗಾಗಿ ವಶಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ರೈತರು ಹೆಮ್ಮಿಗೆಪುರದಲ್ಲಿಯೂ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಗೌಡರು ಬೆಂಬಲ ನೀಡಿದ್ದು, ಯಾವುದೇ ಕಾರಣಕ್ಕೂ ರೈತರ ಜಮೀನನ್ನು ಸರ್ಕಾರ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.