ನಗರ ಪಾಲಿಕೆ ಚುನಾವಣೆ ಎದುರಿಸಲು ಆಡಳಿತಾರೂಢ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಬಿರುಸಿನ ಸಿದ್ಧತೆ ಆರಂಭವಾಗಿದೆ.
ವಿಧಾನಸಭೆ ಚುನಾವಣೆಗೆ ರಾಜ್ಯ ಮಟ್ಟದಲ್ಲಿ ಮಾಡಿಕೊಂಡಿದ್ದ ಸಂಘಟನಾ ವ್ಯವಸ್ಥೆಗಳ ಮಾದರಿಯಲ್ಲಿ ಬಿಬಿಎಂಪಿ ಮಟ್ಟದಲ್ಲಿ ವಿವಿಧ ಸಮಿತಿಗಳ ರಚನೆಗೆ ಬಿಜೆಪಿಯಲ್ಲಿ ಚಾಲನೆ ನೀಡಲಾಗಿದೆ ಎಂದು ಪಕ್ಷದ ಮಹಾನಗರ ಘಟಕದ ಅಧ್ಯಕ್ಷರಾದ ಶಾಸಕ ಬಿ.ಎನ್.ವಿಜಯ್ ಕುಮಾರ್ ತಿಳಿಸಿದ್ದಾರೆ.
10 ರಿಂದ 12 ಸದಸ್ಯರನ್ನು ಒಳಗೊಂಡ ಚುನಾವಣಾ ಸಮಿತಿ ರಚಿಸಲು ಪಕ್ಷದ ಜಿಲ್ಲಾ ಘಟಕವು ನಗರದ 20 ಪ್ರಮುಖರ ಹೆಸರುಗಳನ್ನು ಪಟ್ಟಿ ಮಾಡಿ ವರಿಷ್ಠರಿಗೆ ಕಳುಹಿಸಿಕೊಡಲಾಗಿದೆ. ಪಾಲಿಕೆಗೆ ಸಮಗ್ರವಾದ ಒಂದು ಪ್ರಣಾಳಿಕೆ ಹಾಗೂ ವಿಧಾನಸಭಾ ಕ್ಷೇತ್ರವಾರು ವಿಶೇಷ ಪ್ರಣಾಳಿಕೆ ತಯಾರಿಸಲು ಸಮಿತಿಗಳನ್ನು ರಚಿಸಲಾಗುವುದು. ಪ್ರತಿ ವಾರ್ಡ್‌ನಲ್ಲಿ ಐವರು ಸದಸ್ಯರನ್ನು ಒಳಗೊಂಡ ಸಂಚಲನಾ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಹೇಳಿದರು.