ರೈತರ ಹೆಸರು ಹೇಳಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಬಿ.ಎಸ್. ಯಡಿಯೂರಪ್ಪ ಈಗ ರೈತರನ್ನೇ ಒಕ್ಕಲೆಬ್ಬಿಸುವ ಮಹಾನ್ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮಾಜಿ ನಾಯಕ ವಿ.ಎಸ್.ಉಗ್ರಪ್ಪ ಟೀಕಿಸಿದ್ದಾರೆ.
ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಇಡೀ ರೈತ ಸಮುದಾಯಕ್ಕೇ ಮೋಸ ಮಾಡುತ್ತಿದ್ದಾರೆ. ರೈತರ ಒಪ್ಪಿಗೆ ಇಲ್ಲದೇ ಯಾವುದೇ ಕಾರಣಕ್ಕೂ ಭೂ ಸ್ವಾಧೀನ ಪ್ರಕ್ರಿಯೆ ನಡೆಸುವುದಿಲ್ಲ ಎಂದು ಭರವಸೆ ನೀಡುತ್ತಲೇ ಕೃಷಿ ಭೂಮಿ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹಿತ ಕಾಪಾಡುವಲ್ಲಿ ಕಾಳಜಿ ಇಲ್ಲ. ಕಾಳಜಿ ಇದ್ದಿದ್ದರೆ ಇಂದು ಇಂಥ ರೈತ ಸಂಘಟನೆಗಳು ಮಾಧ್ಯಮಗಳ ಎದುರು ಅಳಲು ತೋಡಿಕೊಳ್ಳುವ ಅಗತ್ಯವಿರಲಿಲ್ಲ ಎಂದರು.