'ರಾಜಕೀಯ ನಾಶಕ್ಕಾಗಿಯೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವತಾರ ಎತ್ತಿರುವುದಾಗಿ' ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಸ್ ವಿಚಾರವಾಗಿ ದೇವೇಗೌಡರು ಬೀದಿಗಿಳಿದಿದ್ದಾರೆ. ಸರ್ಕಾರದ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಅವರೇ ಮಾಡಿಕೊಂಡ ತಪ್ಪಿಗೆ ಬಿಜೆಪಿಯನ್ನು ಹೊಣೆಗಾರರನ್ನಾಗಿಸುವ ಹುನ್ನಾರ ಗೌಡರದ್ದಾಗಿದೆ ಎಂದು ದೂರಿದರು.
ನೈಸ್ ವಿವಾದ ಕುರಿತಂತೆ ಮಾಜಿ ಪ್ರಧಾನಿಗಳು ಅವತಾರ ಪುರುಷನಂತೆ ವರ್ತಿಸುತ್ತಿದ್ದಾರೆ ಎಂದು ಲೇವಡಿ ಮಾಡಿರುವ ಅವರು, ಹಿರಿಯ ರಾಜಕಾರಣಿಯಾಗಿರುವ ಗೌಡರು ನಡೆದುಕೊಳ್ಳುತ್ತಿರುವ ರೀತಿ ಯಾರಿಗೂ ಗೌರವ ತರುವಂತಹದ್ದಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿಗಳಾದ ಗೌಡರಿಗೆ ಸಲಹೆ ನೀಡುವಷ್ಟು ದೊಡ್ಡ ಮನುಷ್ಯ ನಾನಲ್ಲ ಎಂದ ಸದಾನಂದ ಗೌಡರು, ಅವರ ನಡವಳಿಕೆ ಸರಿಯಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.