ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಯೋಗಿಸಿದ ಕೀಳುಮಟ್ಟದ ಮಾತಿಗೆ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಆಗ್ರಹಿಸಿದ್ದಾರೆ.
ಅವರು ಭಾನುವಾರ ಪುತ್ತೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಅವರು ದೇಶದ ಮಾಜಿ ಪ್ರಧಾನಿ, ಇಂತಹ ಕೀಳುಮಟ್ಟದ ಭಾಷೆ ಉಪಯೋಗಿಸುವುದು ಅವರಿಗೆ ಶೋಭೆ ತರುವುದಿಲ್ಲ. ಆ ನಿಟ್ಟಿನಲ್ಲಿ ಗೌಡರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಹಿರಿಯ ರಾಜಕಾರಣಿಯಾದ ಗೌಡರು ಉಪಯೋಗಿಸಿದ ಭಾಷೆಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ನೈಸ್ ವಿವಾದ ಸುಪ್ರೀಂಕೋರ್ಟ್ ಕಟಕಟೆಯಲ್ಲಿದ್ದು, ನ್ಯಾಯಾಲಯದ ತೀರ್ಪು ತಮ್ಮ ವಿರುದ್ಧ ಬರುತ್ತದೆ ಎಂಬ ಆತಂಕದಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
ರಸ್ತೆಯಲ್ಲಿ ಧರಣಿ ನಡೆಸುವ ಮೂಲಕ ಗೌಡರು ರೈತರ ಹಾದಿ ತಪ್ಪಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ಟೀಕಿಸಿದರು. ರಾಜಕೀಯ ವಿಚಾರವನ್ನು ವೈಯಕ್ತಿಕವಾಗಿ ಪರಿಗಣಿಸಿ ಟೀಕಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು.
ಎಲ್ಲೆಡೆ ಪ್ರತಿಭಟನೆ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ದೇವೇಗೌಡರು ಅವಾಚ್ಯ ಶಬ್ದ ಪ್ರಯೋಗಿಸಿ ಬೈದಿರುವುದನ್ನು ಖಂಡಿಸಿ, ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿ, ಗೌಡರ ಪ್ರತಿಕೃತಿ ದಹಿಸಿದರು. ಅಲ್ಲದೇ ಬಿಜೆಪಿ ಮುಖಂಡರು ಗೌಡರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ.
ಘಟನೆ ವಿವರ: 'ನೈಸ್ ವಿರುದ್ಧದ ನಿಜವಾದ ಯುದ್ಧ ಈಗಷ್ಟೇ ಆರಂಭವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಯಾವನ್ರಿ ಅವನು ಸಿಎಂ ಬ್ಲಡಿ ಬಾಸ್ಟರ್ಡ್, ಮಾನ ಮರ್ಯಾದೆ ಇದೆಯಾ ಅವನಿಗೆ. ದೇವೇಗೌಡನ್ನ ಏನೂ ಅಂತ ತಿಳಿದುಕೊಂಡಿದ್ದಾನೆ' ಎಂದು ಏಕವಚನದಲ್ಲಿ ಬೈದಿರುವ ವಿಷಯ ಇದೀಗ ರಾಜಕೀಯ ವಲಯದಲ್ಲಿ ಬಹುದೊಡ್ಡ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ದೊಡ್ಡತೋಗೂರಿನಲ್ಲಿ ಭಾನುವಾರ ರೈತರನ್ನು ಉದ್ದೇಶಿಸಿ ದೇವೇಗೌಡರು ಮಾತನಾಡುತ್ತ, ಮುಖ್ಯಮಂತ್ರಿ ವಿರುದ್ಧ ಅಸಭ್ಯ ಶಬ್ದ ಆಕ್ರೋಶ ವ್ಯಕ್ತಪಡಿಸಿದ್ದರು. ನೈಸ್‌ಗಾಗಿ ರೈತರ ಭೂಮಿ ಕಬಳಿಸುತ್ತಿರುವ ವಿರುದ್ಧ ನಿಜವಾದ ಯುದ್ಧ ಈಗ ಆರಂಭವಾಗಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಘೋಷಿಸಿದ್ದರು.