ಮಾಜಿ ಪ್ರಧಾನಿ, ಹುಟ್ಟು ಹೋರಾಟಗಾರ ಎಂದು ಹೇಳುತ್ತಿರುವ ಎಚ್.ಡಿ.ದೇವೇಗೌಡರು ಕಳೆದ 50ವರ್ಷಗಳ ರಾಜಕೀಯ ಜೀವನದಲ್ಲಿ ಬಡವರಿಗಾಗಿ ಏನು ಮಾಡಿದ್ದಾರೆ? ಗೌಡರದ್ದು ವಿನಾಶಕಾಲೇ ವಿಪರೀತ ಬುದ್ಧಿ ಎಂದು ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಕೂಡ ಏಕವಚನದಲ್ಲಿ ಕಿಡಿಕಾರಿದ್ದಾರೆ.
ಇನ್ನಾದರೂ ರಾಜ್ಯದ ಜನ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವ ರಾಜಕಾರಣಿಗಳ ವಿರುದ್ಧ ಸಮರ ಸಾರಬೇಕು, ಅಂತಹವರನ್ನು ಮನೆಗೆ ಕಳುಹಿಸಬೇಕು ಎಂದು ಅಮೆರಿಕದಲ್ಲಿರುವ ಖೇಣಿ ಕನ್ನಡಪ್ರಭಕ್ಕೆ ದೂರವಾಣಿ ಮೂಲಕ ನೀಡಿದ ಪ್ರತಿಕ್ರಿಯೆಯಲ್ಲಿ ಹರಿಹಾಯ್ದಿದ್ದಾರೆ.
ಭಾನುವಾರ ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯದ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಹಾಗೂ ಅಶೋಕ್ ಖೇಣಿ ವಿರುದ್ಧ ಅವಾಚ್ಯ ಶಬ್ದ ಪ್ರಯೋಗಿಸಿ ನೀಡಿದ ಹೇಳಿಕೆ ರಾಜ್ಯರಾಜಕಾರಣದಲ್ಲಿ ವಿವಾದ ಹುಟ್ಟುಹಾಕಿದೆ.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನನಗೆ ತಾಕೀತು ಮಾಡಿದೆ. ಈ ಕಾರಣದಿಂದ ನಾನು ಯೋಜನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಆದರೆ ಸುಪ್ರೀಂಕೋರ್ಟ್ ನೀಡುವ ಅಂತಿಮ ತೀರ್ಪಿಗೆ ನಾನು ಬದ್ದ ಎಂದು ಹೇಳಿದರು.