ರಾಜ್ಯದ ಜನರಲ್ಲಿ ಗೊಂದಲ ಮೂಡಿಸುವ ಯತ್ನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೊಡಗಿರುವುದಾಗಿ ಗಂಭೀರ ಆರೋಪ ಮಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೌಡರ ಸಂಚಿಗೆ ನಾನು ಆಹಾರವಾಗಲಾರೆ ಎಂದು ತಿರುಗೇಟು ನೀಡಿದ್ದಾರೆ.
ಸೋಮವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್‌ಗೆ ಹೆಚ್ಚುವರಿ ಭೂಮಿ ನೀಡಿಕೆ ವಿಚಾರ ದೇವೇಗೌಡರ ಕಲ್ಪನೆಯದ್ದಾಗಿದೆ. ಆದರೆ ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಜನರ ಮತ್ತು ರೈತರ ಹಾದಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.
ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ನಡೆಸಿ, ಹೇಗಾದರೂ ಮಾಡಿ ಸರ್ಕಾರವನ್ನು ಉರುಳಿಸಬೇಕು ಎಂಬ ಸಂಚು ಗೌಡರದ್ದು, ಆದರೆ ಅವರ ಯತ್ನಕ್ಕೆ ನಾನು ಆಹಾರವಾಗಲಾರೆ ಎಂಬುದನ್ನು ಗೌಡರು ಮನಗಾಣಲಿ ಎಂದು ಹೇಳಿದರು.
ಆವೇಶಕ್ಕೊಳಗಾಗಿ ಗೌಡರು ಬಳಸಿದಂತ ಅವಾಚ್ಯ ಶಬ್ದಗಳನ್ನು ನಾನು ಬಳಸಲಾರೆ, ಆದರೆ ಗೌಡರು ಬಳಸಿರುವ ಭಾಷೆಯ ಬಗ್ಗೆ ಎಲ್ಲೆಡೆ ಚರ್ಚೆ ನಡೆಯಲಿ ಎಂದು ತಿಳಿಸಿದರು.
ಗೌಡರ ಅವಾಚ್ಯ ಶಬ್ದ-ಜೆಡಿಎಸ್ ಕಚೇರಿ ಮೇಲೆ ದಾಳಿ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಎಚ್.ಡಿ.ದೇವೇಗೌಡರು ಬಳಸಿದ ಅವಾಚ್ಯ ಶಬ್ದವನ್ನು ಖಂಡಿಸಿ ರಾಜ್ಯದ ಹಲವೆಡೆ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಗೌಡರ ಪ್ರತಿಕೃತಿಯನ್ನು ಸುಡಲಾಯಿತು.
ಗೌಡರ ಹೇಳಿಕೆಯ ವಿರುದ್ಧ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬೀದರ್‌ನ ಮೋಹನ್ ಮಾರ್ಕೆಟ್‌ನಲ್ಲಿರುವ ಜೆಡಿಎಸ್ ಕಚೇರಿ ಮೇಲೆ ದಾಳಿ ನಡೆಸಿ, ಕಿಟಿಕಿ, ಬಾಗಿಲುಗಳನ್ನು ಧ್ವಂಸಗೊಳಿಸಿರುವ ಘಟನೆ ಸೋಮವಾರ ನಡೆದಿದೆ.
ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಬೆಂಗಳೂರು ನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ದೇವೇಗೌಡರ ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿ, ಪ್ರತಿಕೃತಿಯನ್ನು ದಹಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ವಿರುದ್ಧ ನೀಡಿದ ಹೇಳಿಕೆ ಬಗ್ಗೆ ಗೌಡರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.