ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪ್ರಯೋಗಿಸಿದ ಭಾಷೆ ಬಗ್ಗೆ ಪಕ್ಷ ಹಾಗೂ ಗೌಡರು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗೌಡರ ವಿರುದ್ಧ ಈ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ದುರುದ್ದೇಶದಿಂದ ಪ್ರತಿಭಟನೆಯನ್ನು ಮುಂದುವರಿಸಿದರೆ, ಜೆಡಿಎಸ್ ಕೂಡ ಕೈ ಕಟ್ಟಿ ಕೂರುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೈಸ್ ಕಂಪನಿಗೆ ಹೆಚ್ಚುವರಿ ಭೂಮಿ ನೀಡಿರುವುದು ದೇವೇಗೌಡರ ಕಲ್ಪನೆಯ ಕೂಸು ಎಂದು ಸಿಎಂ ಹೇಳಿಕೆ ನೀಡುತ್ತಿದ್ದಾರೆ. ಆದರೆ ದೇವೇಗೌಡರು ನೈಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಆ ನಿಟ್ಟಿನಲ್ಲಿ ರಾಜ್ಯದ ಜನರ ದಿಕ್ಕು ತಪ್ಪಿಸಬೇಡಿ ಎಂದು ಅವರು ಹರಿಹಾಯ್ದರು.
ಮುಖ್ಯಮಂತ್ರಿಗಳ ವಿರುದ್ಧ ಕೆಟ್ಟ ಭಾಷೆ ಬಳಸಿದ್ದಕ್ಕೆ ಈ ರೀತಿಯ ಪ್ರತಿಭಟನೆ ಮಾಡುವುದಾದರೆ, ರೈತರ ಭೂಮಿಯನ್ನು, ಕೋಟ್ಯಂತರ ರೂಪಾಯಿಯನ್ನು ನುಂಗಿದವರ ಬಗ್ಗೆ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಗೌಡರ ವಿರುದ್ಧದ ಪ್ರತಿಭಟನೆಯನ್ನು ಕೂಡಲೇ ನಿಲ್ಲಿಸಿ, ಇಲ್ಲದಿದ್ದರೆ ನಮ್ಮೊಂದಿಗೂ ಪಕ್ಷದ ಕಾರ್ಯಕರ್ತರಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ದೇವೇಗೌಡರು ಏನೋ ಮಹಾಪರಾಧ ಮಾಡಿದ್ದಾರೆ ಎಂಬಂತೆ ಬಿಜೆಪಿ ಕಾರ್ಯಕರ್ತರು ಬೀದಿ, ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ದೇವೇಗೌಡರು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಬಿಎಂಐಸಿ ಯೋಜನೆಗೆ ಚಾಲನೆ ನೀಡಿದ್ದರು. ನಂತರ ಮುಖ್ಯಮಂತ್ರಿಯಾದಾಗ ಬೇರೆ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರ ಜೆಎಚ್ ಪಟೇಲ್ ಅವರ ಆಡಳಿತಾವಧಿಯಲ್ಲಿ ನೈಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನೈಸ್ ಕರ್ಮಕಾಂಡ ಆರಂಭವಾಯಿತು ಎಂದು ವಿಶ್ಲೇಷಿಸಿದರು.
2002ರಲ್ಲಿ ದೇವೇಗೌಡರು ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಂದರ್ಭದಲ್ಲಿ ರೈತರು ತಮ್ಮ ಗೋಳನ್ನು ಹೇಳಿಕೊಂಡ ನಂತರ ನೈಸ್ ವಿರುದ್ಧದ ಹೋರಾಟಕ್ಕೆ ಧುಮುಕಿದ್ದರು. ಹಾಗೆಂದು ಗೌಡರು ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಾಗಲಿ, ಯಡಿಯೂರಪ್ಪ ಅವರ ವಿರುದ್ಧ ದ್ವೇಷದಿಂದ ಏಕಾಏಕಿ ಹೋರಾಟಕ್ಕೆ ಇಳಿದವರಲ್ಲ ಎಂದು ಸ್ಪಷ್ಟಪಡಿಸಿದರು.