ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಕೀಳು ಮಟ್ಟದ ಭಾಷೆಯನ್ನು ಉಪಯೋಗಿಸುವ ಮೂಲಕ ದೇವೇಗೌಡರು ಪ್ರಧಾನಿ ಹುದ್ದೆಗೆ ಅವಮಾನ ಮಾಡಿದ್ದಾರೆಂದು ಸಾರಿಗೆ ಸಚಿವ ಅಶೋಕ್ ದೂರಿದ್ದಾರೆ.
ಕುಸಿಯುತ್ತಿರುವ ರಾಜಕೀಯ ಮೌಲ್ಯವನ್ನು ಎತ್ತಿಹಿಡಿದು ಉತ್ತಮ ಸಂಸ್ಕೃತಿಗೆ ನಾಂದಿ ಹಾಡಬೇಕಾದ ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿಗಳನ್ನು ಅವಾಚ್ಯ ಪದಗಳಿಂದ ದೂಷಿಸುವ ಮೂಲಕ ಅವರು ಅಲಂಕರಿಸಿದ್ದ, ದೇಶದ ಅತ್ಯುತ್ತಮ ಹುದ್ದೆಯಾದ ಪ್ರಧಾನಿ ಹುದ್ದೆಗೇ ಅವಮಾನ ಮಾಡಿದ್ದಾರೆಂದು ಅವರು ಕಿಡಿಕಾರಿದ್ದಾರೆ.
ಗೌಡರು ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ವಿರುದ್ಧ ಕೆಟ್ಟ ಶಬ್ಧಗಳಿಂದ ವಾಗ್ದಾಳಿ ಮಾಡಿರುವುದು ರಾಜಕೀಯ ವಲಯದಲ್ಲೇ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಲ್ಲದೇ, ರಾಜ್ಯದ ಜನತೆಗೆ ಅಪಮಾನ ಮಾಡಿದಂತಾಗಿದೆ ಎಂದರು.
ನಗರಪಾಲಿಕೆ ಚುನಾವಣೆ ದೃಷ್ಟಿಯಿಂದ ನೈಸ್ ರಸ್ತೆ ನೆಪ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವುದು ಖಂಡನೀಯ ಎಂದು ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.