ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಮಾನಹಾನಿಕರ ಭಾಷೆ ಬಳಸಿ ಬೈದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರುವ ಬಿಜೆಪಿ ರಾಜ್ಯಘಟಕ ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಆದರೆ ದೇವೇಗೌಡರು ಹೇಳಿರುವ ಹೇಳಿಕೆ ಬಗ್ಗೆ ರಾಜ್ಯದ ಜನರೇ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳು ಗೌಡರ ವಿರುದ್ಧ ಯಾವುದೇ ಕಾನೂನು ಕ್ರಮ ಜರಗಿಸಲು ಮುಂದಾಗದಿದ್ದರೂ ಕೂಡ, ಬಿಜೆಪಿ ರಾಜ್ಯ ಘಟಕ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಗೌಡರು ಬೇಷರತ್ ಕ್ಷಮೆಯಾಚಿಸಲೇಬೇಕೆಂದು ಪಟ್ಟು ಹಿಡಿದಿದೆ. ಇಲ್ಲದಿದ್ದರೆ ಕೋರ್ಟ್ ಕಟಕಟೆಗೆ ಎಳೆಯುವುದಾಗಿ ಎಚ್ಚರಿಕೆ ನೀಡಿದೆ.
ದೇವೇಗೌಡರ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅಷ್ಟೇ ಅಲ್ಲ ಗೌಡರು ಕೂಡಲೇ ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ವಕ್ತಾರ ಧನಂಜಯ್ ಕುಮಾರ್ ಆಗ್ರಹಿಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಬಿಜೆಪಿ ಯೋಚಿಸುತ್ತಿರುವುದಾಗಿಯೂ ಹೇಳಿದರು.