ನೈಸ್ ಕಂಪನಿಯ ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಎಂಟು ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೋಮವಾರ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ತರುಣ್ ಚಟರ್ಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ,ಬಿಎಂಐಸಿ ಯೋಜನೆಗೆ ಸಂಬಂಧಿಸಿದ ಉನ್ನತ ಮಟ್ಟದ ಸಭೆ ನಡೆಸಿ ಸಮಗ್ರ ವರದಿಯನ್ನು ಎಂಟು ವಾರದೊಳಗೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ನೈಸ್ ಕಂಪನಿ ರೈತರ ಭೂಮಿಯನ್ನು ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಿ ದೇವೇಗೌಡ, ಯು.ಆರ್.ಅನಂತಮೂರ್ತಿ ಸೇರಿದಂತೆ ಹಲವಾರು ಮಂದಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂದು ದೇವೇಗೌಡರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ರಾಜ್ಯ ಸರ್ಕಾರಕ್ಕೆ ಈ ಆದೇಶ ನೀಡಿದೆ.