ಫೆಬ್ರುವರಿ ತಿಂಗಳಿನಲ್ಲಿ ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ, ಶಿಸ್ತು ಇರುವ ಯುಕರಿಗೆ ಚುನಾವಣೆಯಲ್ಲಿ ಉತ್ತೇಜನ ನೀಡಿ ಹೊಸ ನಾಯಕತ್ವ ಬೆಳೆಸಲಾಗುವುದು ಎಂದು ಹೇಳಿದರು.
ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಬ್ಯಾಟರಾಯನಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆ ಹಾಗೂ ವಿಧಾನಪರಿಷತ್ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜನ ತಿರುಗಿ ಬಿದ್ದಿದ್ದು ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಯುವ ಕಾಂಗ್ರೆಸ್ಸಿಗರಿಗೆ ದೇಶಪಾಂಡೆ ಕರೆ ನೀಡಿದರು. ಪೋಸ್ಟರ್, ಕಟೌಟ್ ಹಾಕುವುದರಿಂದ ಪಕ್ಷ ಬಲಗೊಳ್ಳಲಿದೆ ಎಂಬುವುದು ಸರಿಯಲ್ಲ, ಮೂಲೆ, ಮೂಲೆಯಲ್ಲೂ ಪಕ್ಷವನ್ನು ಬೇರು ಮಟ್ಟದಿಂದ ಸಂಘಟನೆ ಮಾಡುವುದು ಮುಖ್ಯ ಎಂದು ಹೇಳಿದರು.