ಇಲ್ಲಿಂದ 45ಕಿ.ಮೀ.ದೂರದಲ್ಲಿರುವ ಸೇಡಂ ತಾಲೂಕಿನ ಬಿಜಾನಲ್ಲ್ ಗ್ರಾಮದಲ್ಲಿ ಮನುಷ್ಯ ಚರ್ಮದ ಚಪ್ಪಲಿಗೆ ಈಗಲೂ ನೂರಾರು ಭಕ್ತರು ಪೂಜೆ ಸಲ್ಲಿಸುವ ವಾಡಿಕೆ ನಿರಂತರವಾಗಿ ನಡೆಯುತ್ತಾ ಬಂದಿದೆ. ತನ್ನ ಹಾಗೂ ಹೆಂಡತಿಯ ಚರ್ಮವನ್ನೇ ಕಿತ್ತು ಜೋಡಿ ಚಪ್ಪಲಿಯನ್ನು ಹೊಲಿದ ಚಮ್ಮಾರ ದಂಪತಿಗಳು ಅದನ್ನು 12ನೇ ಶತಮಾನದ ಸಮಾಜ ಸುಧಾರಣೆಯ ಹರಿಕಾರ ಬಸವಣ್ಣನವರಿಗೆ ಅರ್ಪಿಸಿದ್ದರು.
ಸುಮಾರು 800ವರ್ಷಗಳಷ್ಟು ಹಳೆಯದಾದ ಈ ಚಪ್ಪಲಿಯನ್ನು ವಿಶೇಷವಾಗಿ ನಿರ್ಮಿಸಿದ್ದ ದೇವಾಲಯವೊಂದರಲ್ಲಿ ಇರಿಸಲಾಗಿದ್ದು, ಇಲ್ಲಿಗೆ ಪ್ರತಿನಿತ್ಯ ರಾಜ್ಯದ ಹಾಗೂ ನೆರೆಯ ಆಂಧ್ರ, ತಮಿಳುನಾಡಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
12ನೇ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧ ಹೋರಾಡಿದ ಭಕ್ತಿ ಭಂಡಾರಿ ಬಸವಣ್ಣನವರಿಗೆ ಚಮ್ಮಾರ ದಂಪತಿಗಳು ನೀಡಿದ್ದ ಚಪ್ಪಲಿಗೆ ತಮ್ಮ ಹರಕೆ ತೀರಿಸುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.
ಬಸವಣ್ಣನವರ ವರ್ಗ ರಹಿತ ಸಮಾಜದ ಹೋರಾಟಕ್ಕೆ ಲಕ್ಷಾಂತರ ಜನ ಪ್ರಭಾವಿತರಾಗುತ್ತಾರೆ. ಅದರಲ್ಲೂ ಮುಖ್ಯವಾಗಿ ಸಮಾಜದ ಕೆಳಸ್ತರದ ಜಾತಿಯವರು. ನಂತರ ಅವರೆಲ್ಲ ಬಸವಣ್ಣನ ಅನುಯಾಯಿಗಳಾದರು.