ಬೈದವರೆನ್ನ ಬಂಧುಗಳೆಂದೆ...ನಿಂದಿಸಿದವರನ್ನ ತಂದೆ-ತಾಯಿಗಳೆಂದೆ...ಜರಿದವರನ್ನ ಜನ್ಮ ಬಂಧುಗಳೆಂದೆ...ಆಡಿಕೊಂಡವರನ್ನ ಆಳಿಸಿಕೊಂಡವರೆಂದೆ...ಹೊಗಳಿದವರನ್ನ ಹೊನ್ನ ಶೂಲಕ್ಕೇರಿಸಿದವರೆಂದೆ...ಎನ್ನ ಕೂಡಲಸಂಗಮದೇವ. ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಸವಣ್ಣನವರ ವಚನ ಉಲ್ಲೇಖಿಸಿ ಮಾಜಿ ಪ್ರಧಾನಿ ದೇವೇಗೌಡರ ನಿಂದನೆಗಳಿಗೆ ಪ್ರತಿಕ್ರಿಯಿಸಿದ ರೀತಿ.
ನಾಡಿನ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಪ್ರಯತ್ನಕ್ಕೆ ಅಡ್ಡಿ ಮಾಡುವ ಪ್ರಯತ್ನದಿಂದಾಗಿ ಜನ ಗೊಂದಲದಲ್ಲಿ ಸಿಲುಕ್ಕಿದ್ದಾರೆ ಎಂದರು.
ಅವರು ಮಂಗಳವಾರ ರಾಜ್ಯ ಹಣಕಾಸು ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತ, ಸಾಮಾನ್ಯ ರೈತನ ಮಗ ನಾನು ಅವಕಾಶ ಸಿಕ್ಕಾಗ ನಾಡನ್ನು ಅಭಿವೃದ್ಧಿ ಮಾಡಬೇಕೆಂಬ ಕನಸು ಕಂಡಿದ್ದೇನೆ. ಬದಲಾವಣೆ ತರುವ ಯತ್ನದಲ್ಲಿ ಕೆಲಸ ಮಾಡುತ್ತಿರುವಾಗ ಇಂತಹ ಟೀಕೆ-ನಿಂದನೆಗಳು ಸಹಜವಾಗಿ ಮನಸ್ಸಿಗೆ ಬೇಸರ ತರಿಸಲಿದೆ. ಹೀಗಾಗಿ ಹೆಚ್ಚಿಗೆ ಏನನ್ನೂ ಹೇಳಲಾರೆ ಎಂದು ತಿಳಿಸಿದರು.
ಅನಾವಶ್ಯಕ ಹೇಳಿಕೆ ನೀಡುವ ಮೂಲಕ ಜನರು ಕೂಡ ಗೊಂದಲದಲ್ಲಿ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಮಾಧ್ಯಮದವರು ವಾಸ್ತವ ಸ್ಥಿತಿಯನ್ನು ತುಲನೆ ಮಾಡಿ ನಿರ್ಧಾರ ಕೈಗೊಳ್ಳಬೇಕು ಎಂದರು.