ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಾಚ್ಯ ಶಬ್ದದಲ್ಲಿ ಬೈದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆ ತೀವ್ರ ವಿವಾದ ಹುಟ್ಟುಹಾಕಿರುವ ಬೆನ್ನಲ್ಲೇ, ವಿಧಾನಸಭೆ ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ಕೂಡ ಅದೇ ಹಾದಿಯಲ್ಲಿ ಸಾಗಿದ್ದು, ರಾಜ್ಯದಲ್ಲಿ ಒಬ್ಬ ಕರೆಂಟ್ ಮಂತ್ರಿ ಇದ್ದಾನೆ. ಮತ್ತೊಬ್ಬ ಭಂಡ ಮುಖ್ಯಮಂತ್ರಿ ಇಬ್ಬರು ಈಡಿಯೆಟ್ಸ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯಿಂದ ವಿಧಾನಪರಿಷತ್ ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ತಮ್ಮ ಮಾತಿನುದ್ದಕ್ಕೂ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ನಾನು ಕಂಡ ಮಹಾನ್ ಸುಳ್ಳುಗಾರ ಮುಕ್ಯಮಂತ್ರಿ. ಇಂತಹ ಮುಖ್ಯಮಂತ್ರಿಯನ್ನು ಇತಿಹಾಸದಲ್ಲಿ ಯಾವತ್ತೂ ಕಂಡಿಲ್ಲ. ಅದೇ ರೀತಿ ದಿನದ 24ಗಂಟೆಯೂ ಕರೆಂಟ್ ನೀಡುತ್ತೇವೆ ಎಂದು ಸುಳ್ಳುವ ಹೇಳುವ ಕರೆಂಟ್ ಮಂತ್ರಿ ಈಶ್ವರಪ್ಪ ಬೊಗಳೆ ಶೂರ ಎಂದು ವ್ಯಂಗ್ಯವಾಡಿದರು.