ಬಿಎಂಐಸಿ ಯೋಜನೆ ವ್ಯಾಪ್ತಿಯ ಪ್ರದೇಶಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಯಾವೊಬ್ಬ ಸದಸ್ಯರ ತುಂಡು ಭೂಮಿಯೂ ಇಲ್ಲ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹೇಳಿಕೆ ಶುದ್ಧ ಸುಳ್ಳು ಎಂದು ನೈಸ್ ಕಂಪನಿ ಸ್ಪಷ್ಟಪಡಿಸಿದೆ.
ದೇವೇಗೌಡರ ಸೊಸೆ ಕವಿತಾ ಅವರ ಹೆಸರಲ್ಲಿ ಕೆಂಗೇರಿ ಹೋಬಳಿಯ ದೇವಗೆರೆ ಗ್ರಾಮದಲ್ಲಿ 5 ಎಕರೆ 37 ಗುಂಟೆ ಜಮೀನು ಇರುವ ಬಗ್ಗೆ ನೈಸ್ ಕಂಪನಿ ಮಾಧ್ಯಮಗಳಿಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಗೌಡರ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಅಲ್ಲದೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಸ್ತಿ ಮೌಲ್ಯ 2004ರ ವಿಧಾನಸಭೆ ಚುನಾವಣೆಗೆ ಮುನ್ನ 2.20 ಕೋಟಿ ರೂ.ಇದ್ದದ್ದು 2007ರ ಜುಲೈ ವೇಳೆಗೆ 4.13 ಕೋಟಿ ರೂ. ಆದದ್ದು ಹೇಗೆ ? ಎಂದು ನೈಸ್ ಕಂಪನಿ ಪ್ರಶ್ನಿಸಿದೆ.
ನೈಸ್ ಯೋಜನೆಯ ಸಮೀಪ ತಮ್ಮ ಕುಟುಂಬಕ್ಕಾಗಲೀ ಅಥವಾ ತನಗೆ ಸೇರಿದ ಒಂದು ಗುಂಟೆ ಜಮೀನು ಇದ್ದಿರುವುದನ್ನು ಸಾಬೀತು ಪಡಿಸಿದರೆ ದೇಶದ ಕ್ಷಮೆ ಕೋರುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಸವಾಲು ಹಾಕಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.