ಹುಬ್ಬಳ್ಳಿ ಈದ್ಗಾ ಮೈದಾನ ಪಾಲಿಕೆ ವಶಕ್ಕೆ: ಸುಪ್ರೀಂ ತೀರ್ಪು
ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂಕೋರ್ಟ್
ನವದೆಹಲಿ, ಬುಧವಾರ, 13 ಜನವರಿ 2010( 16:26 IST )
ವಿವಾದಿತ ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ತನ್ನ ಒಡೆತನಕ್ಕೆ ಒಪ್ಪಿಸಬೇಕೆಂಬ ಅಂಜುಮನ್ ಸಂಸ್ಥೆಯ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸುವ ಮೂಲಕ ಈ ಹಿಂದೆ ಹೈಕೋರ್ಟ್ ನೀಡಿರುವ ಆದೇಶವನ್ನೇ ಎತ್ತಿ ಹಿಡಿದು, ಈದ್ಗಾ ಮೈದಾನವನ್ನು ಪಾಲಿಕೆ ವಶಕ್ಕೊಪ್ಪಿಸಿ ಆದೇಶ ನೀಡಿದೆ.
ಬುಧವಾರ ಅಂಜುಮನ್ ಸಂಸ್ಥೆಯ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಪೀಠ, ತನ್ನ ಒಡೆತನಕ್ಕೆ ಒಪ್ಪಿಸಬೇಕೆಂಬ ವಾದವನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ವರ್ಷಕ್ಕೆ ಎರಡು ಬಾರಿ ಪ್ರಾರ್ಥನೆ ಅವಕಾಶ ನೀಡುವಂತೆ ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಸೂಚನೆ ನೀಡಿದೆ.
ದಶಕಗಳ ಕಾಲದ ಹುಬ್ಬಳ್ಳಿ ಈದ್ಗಾ ಮೈದಾನ ವಿವಾದ ಕುರಿತಂತೆ ಅಂಜುಮಾನ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.ಆದರೆ ಹೈಕೋರ್ಟ್ ಈದ್ಗಾ ಮೈದಾನವನ್ನು ಪಾಲಿಕೆ ವಶಕ್ಕೆ ಒಪ್ಪಿಸಿ ತೀರ್ಪು ನೀಡಿತ್ತು. ಇದರಿಂದ ಅಸಮಾಧಾನಗೊಂಡ ಅಂಜುಮನ್ ಸಂಸ್ಥೆ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಸುದೀರ್ಘ ಕಾಲದ ಒಡೆತನದ ಕಾರಣ ಈದ್ಗಾ ಮೈದಾನ ನಮ್ಮ ಪಾಲಿಗೆ ಭಾವನಾತ್ಮಕ ವಿಷಯ. ಹೀಗಾಗಿ ಸರ್ವೋಚ್ಛ ನ್ಯಾಯಾಲಯ ಯಥಾಸ್ಥಿತಿಯನ್ನು ಬದಲಾಯಿಸಿ ಈ ವಿವಾದಕ್ಕೆ ನೀಡುವ ಮದ್ದು ವ್ಯಾಧಿಗಿಂತ ಭಯಂಕರ ಆಗಕೂಡದು ಎಂದು ಅಂಜುಮನ್ ವಾದಿಸಿತ್ತು.
ಯಾಕೆ ಅಷ್ಟೊಂದು ಕಠಿಣ ನಿಲುವು ಹೊಂದಿದ್ದೀರಿ?ಇದರಲ್ಲಿ ಭಾವನಾತ್ಮಕ ಆಗುವ ವಿಷಯ ಏನಿದೆ?ನಿವೃತ್ತ ನ್ಯಾಯಮೂರ್ತಿಯ ಮೂಲಕ ಮಧ್ಯಸ್ಥಿಕೆ ಸಾಧ್ಯವಿಲ್ಲ. ಕಳೆದ 22ವರ್ಷಗಳಿಂದ ನ್ಯಾಯಾಲಯಗಳು ಮಾಡಿದ್ದು ಮಧ್ಯಸ್ಥಿಕೆಯ ಕೆಲವನ್ನೇ ಅಲ್ಲವೇ ಎಂದು ಸೋಮವಾರ ನಡೆದ ವಿಚಾರಣೆ ವೇಳೆ ನ್ಯಾಯಪೀಠ ಅಂಜುಮನ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತ್ತು.