ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಾಚ್ಯ ಶಬ್ದಗಳಿಂದ ಬೈದಿರುವ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಆಡಳಿತಾರೂಢ ಬಿಜೆಪಿ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆ ಯಡಿಯೂರಪ್ಪ ಅವರನ್ನು ಮುಗಿಸುವ ಸಂಚು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ದೂರಿದ್ದಾರೆ.
ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸುವ ಹುನ್ನಾರ ಎಂದಿರುವ ಅವರು, ಮುಖ್ಯಮಂತ್ರಿ ಅದನ್ನು ಅರ್ಥಮಾಡಿಕೊಂಡು, ವಿವಾದ ಬಗೆಹರಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಬಿಜೆಪಿ ಕೇವಲ ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ ಎಂದು ಆರೋಪಿಸಿದರು.
ಅಲ್ಲದೇ, ದೇವೇಗೌಡರು ಬಳಸಿರುವ ಶಬ್ದವನ್ನು ಕಟುವಾಗಿ ಖಂಡಿಸಿರುವ ಪೂಜಾರಿ,ಅವರು ದೇಶದ ಮಾಜಿ ಪ್ರಧಾನಿಯಾಗಿದ್ದವರು. ಆ ನಿಟ್ಟಿನಲ್ಲಿ ಅಂತಹ ಕೀಳುಮಟ್ಟದ ಭಾಷೆಯನ್ನು ಉಪಯೋಗಿಸಬಾರದು ಎಂದರು. ಆದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕೂಡ ದೇವೇಗೌಡರು ಬಾಡಿಗೆ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆಂದು ಹೇಳುವ ಮೂಲಕ ತಪ್ಪೆಸಗಿದ್ದಾರೆ ಎಂದು ವಿಶ್ಲೇಷಿಸಿದರು.
ನೈಸ್ ವಿವಾದಕ್ಕೆ ಕುರಿತಂತೆ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿರುವ ದೇವೇಗೌಡರ ಬೇಡಿಕೆಗೆ ಕಾಂಗ್ರೆಸ್ ಕೂಡ ಸಾಥ್ ನೀಡುವುದಾಗಿ ಹೇಳಿದರು. ನೈಸ್ ವಿಚಾರದ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಜನರಿಗೆ ಸತ್ಯಾಂಶವನ್ನು ಪೂರ್ಣ ಪ್ರಮಾಣದಲ್ಲಿ ತಿಳಿಸಬೇಕು ಎಂದು ಒತ್ತಾಯಿಸಿದರು.