ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ವಿರುದ್ಧ ಹೀಗೆ ಟೀಕೆ ಮುಂದುವರೆಸಿದರೆ, ತಮ್ಮದೇ ಆದ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಧಮಕಿ ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನದೂ ಸಹ ಸಿದ್ದರಾಮಯ್ಯನ ಜಾತಿಯೇ. ನಾನೂ ಸಹ ಕೈಮಾ ತಿಂದೇ ಬೆಳೆದವನು ಎಂಬುದನ್ನು ಸಿದ್ದು ಅರ್ಥಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ಸಿದ್ದು ಜೆಡಿಎಸ್‌ನಲ್ಲಿದ್ದಾಗ ಯಾವ ಈಡಿಯಟ್ ಕೆಲಸ ಮಾಡಿ ಉಚ್ಚಾಟಿತರಾದರು, ಈಗ ಕಾಂಗ್ರೆಸ್‌ನಲ್ಲಿದ್ದುಕೊಂಡು ಯಾವ ಈಡಿಯಟ್ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಬೇರೆಯದೇ ಭಾಷೆಯಲ್ಲಿ ತಿಳಿಸಬೇಕಾಗುತ್ತದೆ. ಆದರೆ ನನ್ನ ಸಂಘ ಉತ್ತಮ ಸಂಸ್ಕಾರ ಕಲಿಸಿಕೊಟ್ಟಿದೆ. ನನ್ನ ಪೋಷಕರು ಸಿದ್ದು ಬಳಸುವ ಭಾಷೆಯನ್ನು ಹೇಳಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯರಾದ ಸಿದ್ದು ಕೀಳು ರಾಜಕೀಯ ಭಾಷೆಯನ್ನು ಬಳಸಬಾರದು. ವಿಪಕ್ಷ ನಾಯಕನಾದಾಗಿನಿಂದ ಒಮ್ಮೆಯೂ ಸಿದ್ದು ವಿಧಾನಸಭೆಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಿಲ್ಲ. ಅದು ಬಿಟ್ಟು ತಮ್ಮ ಶಾಸಕರನ್ನು ಬಿಟ್ಟು ಗೂಂಡಾಗಿರಿ ನಡೆಸುತ್ತಾರೆ ಎಂದು ಈಶ್ವರಪ್ಪ ಟೀಕಿಸಿದರು.
ಇಡೀ ದೇಶದಲ್ಲೇ ವಿದ್ಯುತ್ ತೊಂದರೆಯಿದೆ. ಹಾಗಂತ ಸಿದ್ದು ಕೇಂದ್ರ ಸಚಿವ ಸುಶೀಕಲ್ ಕುಮಾರ್ ಶಿಂಧೆ ಅವರನ್ನು ಹೀಗೆ ಟೀಕಿಸುತ್ತಾರೆಯೇ ? ಎಂದು ರಾಜ್ಯ ಇಂಧನ ಸಚಿವರು ಪ್ರಶ್ನಿಸುತ್ತಾರೆ.