ಅಕ್ರಮ ರೆವಿನ್ಯೂ ನಿವೇಶನ ಮತ್ತು ಕಟ್ಟಡ ಸಕ್ರಮಗೊಳಿಸುವ ತರಾತುರಿಯ ಸುಗ್ರೀವಾಜ್ಞೆ ಪ್ರಸ್ತಾವನೆಗೆ ಸಹಿ ಹಾಕಲು ರಾಜ್ಯಪಾಲರು ನಿರಾಕರಿಸಿದ್ದು, ಬಿಜೆಪಿ ಸರಕಾರ ತೀವ್ರ ಮುಜುಗರ ಅನುಭವಿಸಿದೆ.
ಬಡಾವಣೆ, ನಿವೇಶನ, ಕಟ್ಟಡಗಳು ಸೇರಿದಂತೆ ಹಲವು ಬಗೆಯ ಅಕ್ರಮ ಉಲ್ಲಂಘನೆಗಳನ್ನು ಅಧಿಕೃತಗೊಳಿಸುವ ಉದ್ದೇಶದ ಯೋಜನೆ ಅಕ್ರಮ-ಸಕ್ರಮವನ್ನು ಶೀಘ್ರ ಜಾರಿಗೊಳಿಸಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರಕಾರ ತೀರ್ಮಾನಿಸಿತ್ತು.
ಅದಕ್ಕಾಗಿ ಸರಕಾರ ಪ್ರಸ್ತಾವ ಸಲ್ಲಿಸಲು ಜನವರಿ 12ರಂದು ನಿರ್ಧರಿಸಿದ ನಂತರ ಸಾರಿಗೆ ಸಚಿವ ಆರ್. ಅಶೋಕ್ ನೇತೃತ್ವದ ನಿಯೋಗ ರಾಜ್ಯಪಾಲರ ಬಳಿ ತೆರಳಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡುವಂತೆ ಕೇಳಿಕೊಂಡಿತ್ತು.
ಆದರೆ ಸರಕಾರದ ಪ್ರಸ್ತಾವವನ್ನು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಾಪಸ್ ಕಳುಹಿಸಿದ್ದಾರೆ. ಈ ಯೋಜನೆ ವಿವಾದಗಳಿಂದ ಕೂಡಿದ್ದು, ವಿಧಾನ ಮಂಡಲದ ಎರಡೂ ಸದನಗಳಲ್ಲಿ ಚರ್ಚೆಯಾಗುವ ಅಗತ್ಯವಿದೆ ಎಂದು ಸರಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.
ಅಲ್ಲದೆ ಶುಕ್ರವಾರದಿಂದ ಬಿಬಿಎಂಪಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದೆ. ಈ ಸಂದರ್ಭದಲ್ಲಿ ಸುಗ್ರೀವಾಜ್ಞೆ ಸಮಂಜಸವಲ್ಲ ಎಂದು ರಾಜ್ಯಪಾಲರು ಹೇಳಿದ್ದು, ತರಾತುರಿಯಲ್ಲಿ ಯೋಜನೆ ಜಾರಿಗೆ ಯತ್ನಿಸುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಸರಕಾರದ ಉದ್ದೇಶ ಏನು? ಮುಂದಿನ ತಿಂಗಳು ಬಿಬಿಎಂಪಿ ಚುನಾವಣೆ ನಡೆಯುತ್ತಿರುವುದರಿಂದ ಅಕ್ರಮ-ಸಕ್ರಮ ಯೋಜನೆಯನ್ನು ಜಾರಿಗೊಳಿಸಿದರೆ ಬಿಜೆಪಿಗೆ ಲಾಭವಾಗಬಹುದು ಎಂಬುದು ಲೆಕ್ಕಾಚಾರ. ಈ ಯೋಜನೆಯಿಂದಾಗಿ ಬೆಂಗಳೂರಿನ ಸುಮಾರು ಆರು ಲಕ್ಷ ಕುಟುಂಬಗಳು ನಿಟ್ಟುಸಿರು ಬಿಡುತ್ತಿದ್ದವು.
ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಕಾರಣ ತಕ್ಷಣ ಜಾರಿಗೊಳಿಸಲು ಅಸಾಧ್ಯ ಎಂಬುದನ್ನು ಮನಗಂಡ ಸರಕಾರವು ಅದನ್ನು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಕ್ಕೆ ತರುವ ಮೂಲಕ ಚುನಾವಣೆಯಲ್ಲಿ ಲಾಭ ಎತ್ತುವ ತಂತ್ರ ಹೂಡಿತ್ತು. ಆದರೆ ರಾಜ್ಯಪಾಲರು ಕಡತಕ್ಕೆ ಸಹಿ ಹಾಕದೆ, ವಾಪಸ್ ಕಳುಹಿಸಿರುವುದರದಿಂದ ಬಿಜೆಪಿಗೆ ತೀವ್ರ ನಿರಾಸೆಯಾಗಿದೆ.
ಪ್ರತಿಪಕ್ಷಗಳ ಪಿತೂರಿ... ಯೋಜನೆ ಸುಗ್ರೀವಾಜ್ಞೆ ಮೂಲಕ ಜಾರಿಯಾಗದಂತೆ ತಡೆಯುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳಿವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹರಿಹಾಯ್ದಿದ್ದಾರೆ.
ಅಕ್ರಮ-ಸಕ್ರಮ ಯೋಜನೆ ಜಾರಿಯಾದರೆ ಬಿಜೆಪಿಗೆ ಲಾಭವಾಗುತ್ತದೆ ಎಂಬ ಪ್ರತಿಪಕ್ಷಗಳ ಗಾಳಿಸುದ್ದಿ ಹಿನ್ನೆಲೆಯಲ್ಲಿ ರಾಜ್ಯಪಾಲರಿಂದ ಸುಗ್ರೀವಾಜ್ಞೆ ಕಡತ ವಾಪಸ್ ಬಂದಿದೆ. ರಾಜ್ಯಪಾಲರ ಆದೇಶಕ್ಕೆ ತಾನು ಬದ್ಧ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಯೋಜನೆ ಜಾರಿಗೆ ಅಡ್ಡಿಪಡಿಸಿರುವುದನ್ನೇ ನಾವು ಪ್ರಮುಖ ಅಸ್ತ್ರವಾಗಿರಿಸಿಕೊಂಡು ಮತದಾರರ ಮುಂದೋ ಹೋಗುತ್ತೇವೆ. ಅವುಗಳ ಜನವಿರೋಧಿ ನೀತಿಯನ್ನು ಬಯಲುಗೊಳಿಸುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.