ಅಕ್ರಮ ಮಾಡುವ ಕೆಲಸವನ್ನೆಲ್ಲ ರೇವಣ್ಣನಿಗೆ ಬಿಟ್ಟಿದ್ದೇನೆ. ಲೋಕೋಪಯೋಗಿ ಮತ್ತು ಇಂಧನ ಖಾತೆ ಸಚಿವರಾಗಿದ್ದಾಗ ಅವರು ಅದನ್ನು ಮಾಡಿ ಮುಗಿಸಿದ್ದಾರೆ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಟೆಂಡರ್ ಹಾಗೂ ನೈಸ್ ಯೋಜನೆಯಲ್ಲಿ ಮುಖ್ಯಮಂತ್ರಿಗಳು ಅಕ್ರಮ ನಡೆಸಿದ್ದಾರೆ ಎಂಬ ರೇವಣ್ಣ ಹೇಳಿಕೆಗೆ ಹೆಸರು ಹೇಳದೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದು, ಹಿಂದೆ ಲೋಕೋಪಯೋಗಿ ಮತ್ತು ಇಂಧನ ಇಲಾಖೆಯಲ್ಲಿ ಇಂಜಿನಿಯರ್‌ಗಳನ್ನು ನೇಮಕ ಮಾಡುವಾಗ ತಮಗೆ ಬೇಕಾದವರನ್ನು ಸೇರಿಸಿಕೊಂಡರು. ಟೆಂಡರ್ ಕರೆಯದೆ ಕೋಟ್ಯಂತರ ರೂ. ವೆಚ್ಚದ ಸಲಕರಣೆಗಳನ್ನು ಖರೀದಿಸಿದರು. ಹೀಗಾಗಿ ಅಕ್ರಮ ಎಸಗುವ ಕೆಲಸಗಳನ್ನು ಅವರಿಗೇ ಬಿಟ್ಟಿದ್ದೇನೆ ಎಂದರು.
ಆಡಳಿತಾರೂಢ ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಹಿಸಲಾಗದೆ ಪ್ರತಿಪಕ್ಷಗಳು ಅನಾವಶ್ಯಕವಾಗಿ ಆರೋಪಗಳನ್ನು ಹೊರಿಸುವ ಕಾರ್ಯದಲ್ಲಿಯೇ ನಿರತವಾಗಿವೆ ಎಂದು ಕಿಡಿಕಾರಿದರು.
ಪ್ರತಿಪಕ್ಷಗಳ ಗೊಡ್ಡು ಬೆದರಿಕೆಗಳಿಗೆ ತಮ್ಮ ಸರ್ಕಾರ ಮಣಿಯುವುದಿಲ್ಲ ಎಂದ ಅವರು, ಜನಪರ ಅಭಿವೃದ್ಧಿಯೇ ಸರ್ಕಾರದ ಗುರಿ ಎಂದು ಹೇಳಿದರು.