ನಮಗಿಂತ ಹಿಂದೆ ಇದ್ದ ಸರ್ಕಾರಗಳು ನಡೆಸಿರುವ ಅಕ್ರಮಗಳನ್ನು ಜಗಜ್ಜಾಹೀರು ಮಾಡಲು ವಾರದಲ್ಲಿ ಒಂದು ದಿನವನ್ನು ಮೀಸಲಿಡಲು ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ಗುರುವಾರ ನಗರದ ನೂತನ ಮೇಲ್ಸೇತುವೆಯೊಂದನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಜಿನಿಯರುಗಳ ನೇಮಕ, ಕೆಪಿಟಿಸಿಎಲ್‌ನಲ್ಲಿ ವಿವಿಧ ವಸ್ತುಗಳ ಖರೀದಿ ಮತ್ತಿತರ ಪ್ರಕರಣಗಳಲ್ಲಿ ಯಾರು ಏನು ಮಾಡಿದ್ದಾರೆ ಎಂಬುದನ್ನು ಜನತೆಯ ಮುಂದಿಡುತ್ತೇನೆ. 20 ತಿಂಗಳ ಕಾಲ ಉಪ ಮುಖ್ಯಮಂತ್ರಿಯಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಈಗ ಎಲ್ಲವನ್ನೂ ತೆರೆದಿಡುವುದು ಅನಿವಾರ್ಯ ಎನಿಸಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಮೇಲೆ ಸಿಎಂ ಹರಿಹಾಯ್ದರು.
ಬಿಎಂಐಸಿ ಯೋಜನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು. ಅನಾವಶ್ಯಕವಾಗಿ ಆಡಳಿತಾರೂಢ ಸರ್ಕಾರ ಹಾಗೂ ನನ್ನ ವಿರುದ್ಧ ಅಸಂಬದ್ಧ ಹೇಳಿಕೆ ನೀಡುವ ಮೂಲಕ ಜನರ ಹಾದಿತಪ್ಪಿಸುವ ಕೆಲಸದಲ್ಲಿ ಪ್ರತಿಪಕ್ಷಗಳು ನಿರತವಾಗಿರುವುದಾಗಿ ಆರೋಪಿಸಿದರು.