ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಜನವರಿ 20ರೊಳಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಏತನ್ಮಧ್ಯೆ ಪಕ್ಷದ ಹಿರಿಯ ಮುಖಂಡರಾದ ಅರಗ ಜ್ಞಾನೇಂದ್ರ ಹಾಗೂ ಸಿ.ಟಿ.ರವಿ ನಡುವೆ ಪೈಪೋಟಿ ಏರ್ಪಟ್ಟಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರಗ ಜ್ಞಾನೇಂದ್ರ ಅವರ ಹೆಸರು ಬಹುತೇಕವಾಗಿ ಕೇಳಿ ಬಂದ ಬೆನ್ನಲ್ಲೇ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕೂಡ ತಾವೂ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಇಬ್ಬರ ನಡುವೆ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜನವರಿ 17 ಅಥವಾ 18ರಂದು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಚುನಾವಣೆ ನಡೆಸದೆ ಅವಿರೋಧವಾಗಿ ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ರಾಜ್ಯಾಧ್ಯಕ್ಷರಾಗಿರುವ ಡಿ.ವಿ.ಸದಾನಂದ ಗೌಡರ ಅಧ್ಯಕ್ಷರಾವಧಿ ಮುಗಿಯುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆ.