ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಕಮಿಷನ್ ಪಡೆಯುವಲ್ಲಿ ನಿಸ್ಸೀಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 3,400ಕೋಟಿ ರೂಪಾಯಿ ಟೆಂಡರ್ ಅನ್ನು ರಾತ್ರಿ ವೇಳೆ ಪ್ರಕ್ರಿಯೆ ನಡೆಸಿದ್ದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಬಿಬಿಎಂಪಿ ರಾತ್ರಿ ವೇಳೆ ನಡೆಸಿದ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ ನಿಮ್ಮಲ್ಲಿ ಏನಾದ್ರೂ ದಾಖಲೆ ಇದೆಯೇ, ಸುಮ್ಮನೆ ಕಾನೂನು ಕೈಗೆ ತೆಗೆದುಕೊಳ್ಳುವ ಬೆಳವಣಿಗೆ ಒಳ್ಳೆಯದಲ್ಲ ಎಂದು ಮೀನಾ ಪರೋಕ್ಷವಾಗಿ ರಾಜಕೀಯ ಪಕ್ಷಗಳ ವಿರುದ್ಧ ಗುಡುಗಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಟೆಂಡರ್‌ಗಳಲ್ಲಿ ಪಾಲಿಕೆ ಆಯುಕ್ತರಿಗೆ ಕಮಿಷನ್ ಇದ್ದು, ಮೀನಾ ಅನುಭವದ ಆಧಾರದ ಮೇಲೆ ಆಯುಕ್ತರಾದವರಲ್ಲ ಎಂದು ಕಿಡಿಕಾರಿದ್ದಾರೆ. ಈ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ನಡೆದಿರುವುದಾಗಿ ಅವರು ಈ ಸಂದರ್ಭದಲ್ಲಿ ದೂರಿದ್ದಾರೆ.
ಏತನ್ಮಧ್ಯೆ ಬಿಬಿಎಂಪಿಯ ಈ ಎಲ್ಲಾ ಗುತ್ತಿಗೆ ವ್ಯವಹಾರಗಳಿಗೆ ಇ-ಟೆಂಡರ್ ಕರೆಯಲಾಗಿದೆ. ಹಾಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಲು ಬರುವುದಿಲ್ಲ. ಇದು ಗೊತ್ತಿದ್ದು ವಿರೋಧ ಪಕ್ಷದವರು ಅಧಿಕಾರಿಗಳ ಕಚೇರಿಗೆ ನುಗ್ಗಿ ದಾಂಧಲೆ ನಡೆಸುವುದು ಸರಿಯೇ?ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ ಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಮೀನಾ ಹರಿಹಾಯ್ದಿದ್ದಾರೆ.