'ನಾನು ಸರ್ಕಾರಕ್ಕೆ ಈಡಿಯಟ್ ಎಂದಿದ್ದೆ ವಿನಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅವಾಚ್ಯ ಶಬ್ದಗಳಿಂದ ಬೈದಿಲ್ಲ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತರೂಢ ಬಿಜೆಪಿ ಸರ್ಕಾರವೇ ಈಡಿಯಟ್ ಎಂದಿದ್ದೆ. ಮುಖ್ಯಮಂತ್ರಿಗಳಿಗೆ ಈಡಿಯಟ್ ಎಂದು ಹೇಳಿಲ್ಲ. ಸರ್ಕಾರಿ ಅಧಿಕಾರಿಗಳು ಸಚಿವರ ಕೈಗೊಂಬೆಯಂತೆ ವರ್ತಿಸುತ್ತಿರುವುದಾಗಿ ಆರೋಪಿಸಿದರು.
ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾತ್ರೋರಾತ್ರಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿರುವುದಾಗಿ ದೂರಿದ ಅವರು, ಸರ್ಕಾರವೇ ಈಡಿಯಟ್ ಥರ ವರ್ತಿಸುತ್ತಿರುವುದಾಗಿ ಹೇಳಿದರು.
ಅಲ್ಲದೇ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದ ಸಿದ್ದರಾಮಯ್ಯ 198ವಾರ್ಡ್ಗಳಿಗೂ ಕಾಂಗ್ರೆಸ್ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದರು.