ನೈಸ್ ಕಾರಿಡಾರ್ ಯೋಜನೆ ಕುರಿತು ಅಂತಿಮ ತೀರ್ಪು ಬರುವವರೆಗೆ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನು ನೋಂದಣಿ ಮಾಡಬಾರದು ಎಂದು ಗುಡುಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಒಂದು ವೇಳೆ ಅಂತಹ ಪ್ರಕ್ರಿಯೆ ನಡೆದರೆ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ನೈಸ್ ರಸ್ತೆಗೆ ಹೆಚ್ಚಿನ ಭೂಮಿ ನೀಡುವುದನ್ನು ವಿರೋಧಿಸಿ ಹೋರಾಟ ಮುಂದುವರಿಸಿರುವ ಅವರು ಶನಿವಾರ ಮಾಗಡಿ ರಸ್ತೆ ಗೊಲ್ಲರಹಟ್ಟಿ ಬಳಿ ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ನೈಸ್ ಕುರಿತು ಅಂತಿಮ ತೀರ್ಪು ಏಪ್ರಿಲ್ ತಿಂಗಳಲ್ಲಿ ಹೊರಬರುವ ಸಾಧ್ಯತೆ ಇದ್ದು, ಆ ತೀರ್ಪು ಹೊರಬರುವವರೆಗೆ ಜಮೀನು ನೋಂದಣಿ ಮಾಡಬಾರದು. ತೀರ್ಪಿಗೆ ಮುನ್ನ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಬಾರದೆಂದು ಹೇಳಿದ್ದಾರೆ.
ಒಂದು ವೇಳೆ ರೈತರ ಜಮೀನು ನೋಂದಣಿ ಮಾಡಲು ಮುಂದಾದರೆ ರೈತರೊಂದಿಗೆ ಸೇರಿ ತಾವೇ ಖುದ್ದಾಗಿ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ. ನೈಸ್ ಮುಖ್ಯಸ್ಥ ಖೇಣಿ ಸರ್ಕಾರಿ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ ಅವರು, ಇಂತಹ ಅತಿಕ್ರಮಣ ಪ್ರದೇಶಗಳಲ್ಲಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.