ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲವ್ ಜಿಹಾದ್: ಪೂರ್ಣ ವರದಿ ನೀಡಲು 6ವಾರ ಗಡುವು (Love jihad | Karnataka | High Court | Kerala)
Bookmark and Share Feedback Print
 
ರಾಜ್ಯಾದ್ಯಂತ ತೀವ್ರ ವಿವಾದಕ್ಕೆ ಗ್ರಾಸವಾಗಿದ್ದ 'ಲವ್ ಜಿಹಾದ್' ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಪೊಲೀಸ್ ಇಲಾಖೆಗೆ ಹೈಕೋರ್ಟ್ ಮಂಗಳವಾರ 6ವಾರಗಳ ಕಾಲ ಸಮಯಾವಕಾಶ ನೀಡಿದೆ.

ಚಾಮರಾಜನಗರ ಸೆಲ್ವಿರಾಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆದೋರಿದ್ದ ಲವ್ ಜಿಹಾದ್ ವಿವಾದದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠದ ನ್ಯಾಯಾಧೀಶರಾದ ಕೆ.ಶ್ರೀಧರ್ ರಾವ್ ಮತ್ತು ರವಿ.ಬಿ.ಮಳಿಮಠ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಆರು ವಾರಗಳೊಳಗೆ ಪೂರ್ಣ ವರದಿ ನೀಡುವಂತೆ ಆದೇಶಿಸಿದೆ. ಹಿಂದು ಹುಡುಗಿಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ನಂತರ ಅವರನ್ನು ಮುಸ್ಲಿಂ ಯುವಕರು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆಂಬ ಲವ್ ಜಿಹಾದ್ ವಿವಾದ ಕರ್ನಾಟಕ ಮತ್ತು ಕೇರಳದಲ್ಲಿ ಸಾಕಷ್ಟು ಚರ್ಚೆಗೆ ಈಡಾಗಿತ್ತು.

ಡಿಐಜಿ ಮಾಲಿನಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿರುವುದರಿಂದ ಆರು ವಾರಗಳ ಕಾಲಾವಕಾಶ ಬೇಕೆಂದು ಸರ್ಕಾರಿ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಈ ಸಮಯಾವಕಾಶ ನೀಡಿದೆ.

ಈ ಸಂದರ್ಭದಲ್ಲಿ ಅರ್ಜಿದಾರ ಪರ ವಕೀಲರು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನ್ಯಾಯಾಲಯ ನೀಡಿದ ಆದೇಶದನ್ವಯ ಕೇರಳ ಹೈಕೋರ್ಟ್ ತೀರ್ಪಿನ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದನ್ನು ಸ್ವೀಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ 6ವಾರಗಳ ಸಮಯಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಸಂಬಂಧಿತ ಮಾಹಿತಿ ಹುಡುಕಿ