ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜೆಡಿಎಸ್‌ನಲ್ಲಿ ಯಾರಿಗೂ ಉಳಿಗಾಲವಿಲ್ಲ: ಇಬ್ಬರ ರಾಜೀನಾಮೆ (JDS | Deve gowda | Kumaraswmay | Thippanna)
Bookmark and Share Feedback Print
 
NRB
ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿಎಸ್‌ನ ಹಿರಿಯ ಮುಖಂಡರಾದ ಎನ್.ತಿಪ್ಪಣ್ಣ, ಗುರುದೇವ್ ವಿಧಾನಪರಿಷತ್ ಸದಸ್ಯತ್ವಕ್ಕೆ ಗುರುವಾರ ರಾಜೀನಾಮೆ ನೀಡುವ ಮೂಲಕ ವಿಧಾನಪರಿಷತ್‌ನಲ್ಲೂ ಆಪರೇಶನ್ ಕಮಲ ಮುಂದುವರಿದಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ.

ಮೇಲ್ಮನೆ ಸದಸ್ಯರಾಗಿರುವ ತಿಪ್ಪಣ್ಣ ಮತ್ತು ಗುರುದೇವ್ ತಮ್ಮ ರಾಜೀನಾಮೆ ಪತ್ರವನ್ನು ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಅವರಿಗೆ ಸಲ್ಲಿಸಿದ್ದು, ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ಮತ್ತಿಕಟ್ಟಿ ತಿಳಿಸಿದ್ದಾರೆ.

ಜೆಡಿಎಸ್ ಮುಖಂಡರಿಬ್ಬರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಜೆಡಿಎಸ್‌ನಲ್ಲಿ ಯಾರಿಗೂ ಉಳಿಗಾಲವಿಲ್ಲ: ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ವಿಧಾನಸೌಧದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ತಿಪ್ಪಣ್ಣ ಮತ್ತು ಗುರುದೇವ್, ಜೆಡಿಎಸ್ ಪಕ್ಷದಲ್ಲಿ ಯಾರಿಗೂ ಉಳಿಗಾಲವಿಲ್ಲ. ಅಪ್ಪ-ಮಕ್ಕಳ ಬಾಯಿ ಎಂದರೆ ಬೊಂಬಾಯಿ ಆಗಿದೆ ಎಂದು ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷದ ವರಿಷ್ಠರಿಗೆ ಮಾತನಾಡುವುದಕ್ಕೆ ಇತಿಮಿತಿಯೇ ಇಲ್ಲ, ನೈಸ್ ಮತ್ತು ರೆಡ್ಡಿಗಳ ವಿರುದ್ಧವೇ ಹೋರಾಟ ನಡೆಸುವ ಮೂಲಕ ಗೌಡರು ಯಾವ ಪುರುಷಾರ್ಥ ಸಾಧಿಸುತ್ತಾರೆ ಎಂದು ಪ್ರಶ್ನಿಸಿದರು.

ಅವರಿಗೆ ಒಳ್ಳೆಯದಾಗಲಿ-ದೇವೇಗೌಡ: ಇಷ್ಟು ದಿನ ಪಕ್ಷಕ್ಕಾಗಿ ದುಡಿದಿದ್ದಾರೆ, ಅವರಿಗೆ ಎಲ್ಲಿ ಆನಂದ, ಸುಖ ಸಿಗುತ್ತೋ ಅಲ್ಲಿರಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ತಿಪ್ಪಣ್ಣ ಮತ್ತು ಗುರುದೇವ್ ರಾಜೀನಾಮೆ ಕುರಿತಂತೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ ಎಂದರು. ಆದರೆ ಇದು ಬಿಜೆಪಿ ಪಕ್ಷದ ಆಪರೇಶನ್ ಕಮಲದ ಮುಂದುವರಿದ ಭಾಗ ಎನ್ನುತ್ತೀರಾ ಎಂಬ ಪ್ರಶ್ನೆಗೆ, ನಾನೇನೂ ಹೇಳಲಾರೆ. ಅವರಿಗೆ ಎಲ್ಲಿ ಸಂತೋಷ ಸಿಗುತ್ತೋ ಅಲ್ಲಿಗೆ ಹೋಗಲಿ ಎಂದಷ್ಟೇ ಚುಟುಕಾಗಿ ಉತ್ತರಿಸಿದರು.

ಜೆಡಿಎಸ್ ಸಂಖ್ಯಾಬಲ ಕುಸಿತ: ಮೇಲ್ಮನೆಯಲ್ಲಿ ಕಾಂಗ್ರೆಸ್‌ನ 3ಮಂದಿ ನಾಮನಿರ್ದೇಶಿತ ಸದಸ್ಯರ ಅಧಿಕಾರಾವಧಿ ಬುಧವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಖ್ಯಾ ಬಲ 19ರಿಂದ 16ಕ್ಕೆ ಇಳಿದಿದ್ದು 3ನೇ ಸ್ಥಾನಕ್ಕೆ ಕುಸಿದಿತ್ತು. ಜೆಡಿಎಸ್ 17ಸದಸ್ಯರನ್ನು ಹೊಂದುವ ಮೂಲಕ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಅರ್ಹವಾಗಿತ್ತು. ಆದರೆ ಇದೀಗ ದಿಢೀರ್ ಬೆಳವಣಿಗೆಯಿಂದಾಗಿ ಜೆಡಿಎಸ್‌ನ ಇಬ್ಬರು ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಅದರ ಸಂಖ್ಯಾಬಲ 15ಕ್ಕೆ ಕುಸಿದಂತಾಗಿದೆ.

ಇದು ಆಡಳಿತಾರೂಢ ಬಿಜೆಪಿ ಪಕ್ಷದ ಆಪರೇಶನ್ ಕಮಲದ ಮುಂದುವರಿದ ಭಾಗ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ. ವಿಧಾನಪರಿಷತ್‌ನಲ್ಲೂ ಬಿಜೆಪಿ ತನ್ನ ಕೆಟ್ಟ ಚಾಳಿಯನ್ನು ಮುಂದುವರಿಸಿದೆ ಎಂದು ದೂರಿದೆ.
ಸಂಬಂಧಿತ ಮಾಹಿತಿ ಹುಡುಕಿ