ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮತ್ತೆ ಚರ್ಚ್ ಮೇಲೆ ದಾಳಿ: ಕಾಂಗ್ರೆಸ್ ಕಿಡಿ (Mysore | Church attack | Congress | BJP | Yeddyurappa)
Bookmark and Share Feedback Print
 
ಸಾಂಸ್ಕೃತಿಕ ನಗರಿ ಮೈಸೂರಿನ ಹೋಲಿ ಫ್ಯಾಮಿಲಿ ಚರ್ಚ್ ಮತ್ತು ಮುರುಡೇಶ್ವರ ಸಮೀಪದ ಸೇಂಟ್ ಅಂತೋನಿ ಚರ್ಚ್ ಮೇಲೆ ಭಾನುವಾರ ಮಧ್ಯರಾತ್ರಿ ವೇಳೆ ಕಿಡಿಗೇಡಿಗಳು ದಾಳಿ ನಡೆಸುವ ಮೂಲಕ ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿ ಮುಂದುವರಿದಂತಾಗಿದೆ.

ಚರ್ಚ್ ಆವರಣದಲ್ಲಿರುವ ಮೂರ್ತಿ, ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಲಾಗಿದೆ. ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಯಾವುದೇ ಮತಾಂತರ ಕಾರ್ಯ ನಡೆದಿಲ್ಲ. ಆದರೂ ದುರುದ್ದೇಶಪೂರ್ವಕವಾಗಿ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ ಎಂದು ಕ್ರೈಸ್ತ ಕನ್ನಡ ಸಂಘದ ಮುಖ್ಯಸ್ಥ ರಾಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಚರ್ಚ್ ಹುಂಡಿಯ ಹಣ ದೋಚಲು ಯತ್ನ ನಡೆಸಲಾಗಿತ್ತು. ಈ ಬಗ್ಗೆ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿತ್ತು. ಆದರೆ ಈ ಬಾರಿ ಯಾವ ಕಾರಣಕ್ಕಾಗಿ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ ಎಂದು ಎಸ್‌ಪಿ ಸುನೀಲ್ ಅಗರ್‌ವಾಲ್ ತಿಳಿಸಿದ್ದಾರೆ.

ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮೀಪದ ಪೆರ್ನಮಕ್ಕಿಯ ಸೇಂಟ್ ಅಂತೋನಿ ಚರ್ಚ್ ಮೇಲೆ ಕೂಡ ದಾಳಿ ನಡೆದಿದ್ದು, ಕಿಟಕಿ ಗಾಜುಗಳನ್ನು ಪುಡಿಗೈಯಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಕಿಡಿ: ರಾಜ್ಯದಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರ ಕೋಮುವಿರೋಧಿ ಭಾವನೆ ಹೊಂದಿದ್ದು, ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿ ನಿರಂತರವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದ್ದರೆ, ಚರ್ಚ್ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಬಂಧಿತ ಮಾಹಿತಿ ಹುಡುಕಿ