ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಈದ್ಗಾ ಧ್ವಜಾರೋಹಣ ಶಾಂತಿಯುತ; ಅಂಜುಮನ್ ಬಹಿಷ್ಕಾರ (edga maidan | Hubli | Karnataka | anjuman e islam)
Bookmark and Share Feedback Print
 
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸರಕಾರದ ಆದೇಶದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ್ದು, ಸಮಾರಂಭ ಶಾಂತಿಯುತವಾಗಿ ನಡೆದಿದೆ.

ಇಂದು ನಡೆಯುವ ಧ್ವಜಾರೋಹಣವನ್ನು ಪಾಲಿಕೆ ಆಯುಕ್ತರು ನಡೆಸಬಾರದು, ಅದನ್ನು ತಮ್ಮ ಸಂಸ್ಥೆಯ ಅಧ್ಯಕ್ಷರು ನಡೆಸಲು ಅವಕಾಶ ನೀಡಬೇಕೆಂದು ಅಂಜುಮನ್ ಎ ಇಸ್ಲಾಂ ಸಂಸ್ಥೆ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿತ್ತು.

ಪಾಲಿಕೆ ಆಯುಕ್ತರು ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಬೇಕೆಂದು ಸರಕಾರ ಆದೇಶ ನೀಡಿದ್ದರಿಂದ ಪಿ.ಎಸ್. ವಸ್ತ್ರದ್ ಅವರು ಧ್ವಜಾರೋಹಣ ಮಾಡಿದರು. ತೀವ್ರ ಕುತೂಹಲ ಕೆರಳಿಸಿದ್ದ ಕಾರಣ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಳೆದ ಹಲವು ವರ್ಷಗಳಿಂದ ವಿವಾದದಲ್ಲೇ ಮುಳುಗೇಳುತ್ತಿದ್ದ ಈದ್ಗಾ ಮೈದಾನದಲ್ಲಿ ಈ ವರ್ಷದಿಂದ ಧ್ವಜಾರೋಹಣವನ್ನು ಸರಕಾರವೇ ನಡೆಸುವ ಹಿನ್ನೆಲೆಯಲ್ಲಿ ಅಂಜುಮನ್ ಸಂಸ್ಥೆ ಬಹಿಷ್ಕಾರ ಹಾಕಿತ್ತು.

ಆದರೂ ಇಂದಿನ ಧ್ವಜಾರೋಹಣ ಸಮಾರಂಭದಲ್ಲಿ ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಮತ್ತು ಕೆಲಸ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ.

ಅಂಜುಮನ್ ಮುಖ್ಯಸ್ಥ ಯೂಸುಫ್ ಸವಣೂರು ಅವರು, ಮುಸ್ಲಿಮರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಕರೆ ನೀಡಿದ್ದರು.

ಧ್ವಜಾರೋಹಣ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಸುತ್ತಮುತ್ತಲ ಪ್ರದೇಶವನ್ನು ಬಹುತೇಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನಗರದಾದ್ಯಂತ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ವಾಹನ ಸಂಚಾರವನ್ನೂ ನಿಷೇಧಿಸಲಾಗಿತ್ತು. ಸಾವಿರಾರು ಪೊಲೀಸರನ್ನು ನಿಯೋಜಿಸುವ ಅಗತ್ಯವಾದರೂ ಏನಿತ್ತು ಎಂದು ಕೆಲವು ಆಕ್ಷೇಪವನ್ನೂ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

ಈದ್ಗಾ ಮೈದಾನವನ್ನು ಅಂಜುಮನ್ ಸಂಸ್ಥೆಗೆ ನೀಡಲಾಗಿದ್ದು, ಸರ್ಕಾರ ಇದನ್ನು ಹಿಂದಕ್ಕೆ ಪಡೆದಿಲ್ಲ. ಹಾಗಾಗಿ ಇದು ಸಾರ್ವಜನಿಕ ಜಾಗವಲ್ಲ. ಇಲ್ಲಿ ಧ್ವಜಾರೋಹಣ ಮಾಡಲು ಆದೇಶಿಸುವ ಅಧಿಕಾರ ಜಿಲ್ಲಾಧಿಕಾರಿಗಿಲ್ಲ ಎಂದು ಅಂಜುಮನ್ ಸಂಸ್ಥೆ ವಾದಿಸಿತ್ತು.

ಆದರೆ ಇದನ್ನು ಆಕ್ಷೇಪಿಸಿದ್ದ ನ್ಯಾಯಾಧೀಶರು, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ಅಧಿಕಾರ ಎಲ್ಲರಿಗೂ ಇದೆ. ಸರಕಾರ ಧ್ವಜಾರೋಹಣ ಮಾಡಿದರೆ ಮಾತ್ರ ಶಾಂತಿಗೆ ಭಂಗ ಬರುತ್ತದೆ ಎಂಬುದು ಹುರುಳಿಲ್ಲದ ವಾದ. ಇಲ್ಲಿ ಸಾರ್ವಜನಿಕ ಹಿತಾಸಕ್ತಿ ಬದಲು ನಿಮ್ಮ ವೈಯಕ್ತಿಕ ಹಿತಾಸಕ್ತಿ ಎದ್ದು ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ