ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದುಷ್ಟಶಕ್ತಿಗಳನ್ನು ಮಟ್ಟ ಹಾಕಿ: ಸಿಎಂಗೆ ರಾಜ್ಯಪಾಲ ಸೂಚನೆ (HR Hansraj Bharadhwaj | Karnataka | Governor | Church attack)
Bookmark and Share Feedback Print
 
ನಮ್ಮ ಸಂವಿಧಾನವು ಸರ್ವ ಧರ್ಮಗಳನ್ನೂ ಸಮಾನ ಭಾವನೆಯಿಂದ ಕಂಡಿದೆ. ಆ ತತ್ವಗಳನ್ನು ನಾವೆಲ್ಲರೂ ಕರಾರುವಕ್ಕಾಗಿ ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಆಗಾಗ ನಡೆಯುತ್ತಿರುವ ಕೋಮು ಸೌಹಾರ್ದತೆಯನ್ನು ಕೆಡಿಸುವ ಶಕ್ತಿಗಳನ್ನು ಮಟ್ಟ ಹಾಕುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ. ಅದನ್ನು ಅವರು ಮಾಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದ್ದಾರೆ.

ಗಣರಾಜ್ಯೋತ್ಸವದಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಅವರು ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದ ಅವರು, ಮೈಸೂರು ಮತ್ತು ಭಟ್ಕಳಗಳಲ್ಲಿ ನಡೆದ ಚರ್ಚ್ ದಾಳಿ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿದರು.

ಪೊಲೀಸ್ ಇಲಾಖೆಯು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಮ್ಮದು ಜಾತ್ಯತೀತ ದೇಶ. ಸಂವಿಧಾನದ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಹಾಗಾಗಿ ದುಷ್ಕರ್ಮಿಗಳ ಕುಕೃತ್ಯಗಳನ್ನು ಸಹಿಸಿ ಸುಮ್ಮನಿರಲು ಅಸಾಧ್ಯ. ಅಂತಹ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ರಾಜ್ಯಪಾಲರು ಸಲಹೆ ನೀಡಿದರು.

ಎಲ್ಲಾ ಧರ್ಮ ಮತ್ತು ಜನಾಂಗದ ಜನ ಮೂಲಭೂತ ಸ್ವಾತಂತ್ರ್ಯವನ್ನು ಅನುಭವಿಸುವುದರ ಜತೆಗೆ ತಮ್ಮ ಧರ್ಮಗಳನ್ನು ವಿಧಿಬದ್ಧವಾಗಿ ಸಂವಿಧಾನದ ಚೌಕಟ್ಟು ಮೀರದಂತೆ ಆಚರಿಸುವ ಹಕ್ಕಿಗೆ ಚ್ಯುತಿ ಬರಬಾರದು. ಇದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಆಕಾಂಕ್ಷೆಯಾಗಿತ್ತು. ಪ್ರಜಾಪ್ರಭುತ್ವ ಮತ್ತು ಆಡಳಿತದಲ್ಲಿನ ತತ್ವಗಳನ್ನು ಯಾರೇ ಉಲ್ಲಂಘಿಸಿದರೂ ಅವರನ್ನು ಶಿಕ್ಷಿಸಲಾಗುತ್ತದೆ. ಈ ಬಗ್ಗೆ ರಾಜ್ಯ ಸರಕಾರದ ಬಗ್ಗೆ ನನಗೆ ಅಪಾರ ಭರವಸೆಗಳಿವೆ ಎಂದರು.

ಜಾತ್ಯತೀತ ರಾಷ್ಟ್ರಕ್ಕೆ ನಾನು ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ಜೀವನ ಪರ್ಯಂತ ಇದೇ ರೀತಿ ಉಳಿಯುವುದಾಗಿ ಹೇಳಿದ ಅವರು, ಪ್ರತಿಯೊಬ್ಬ ಕನ್ನಡಿಗ, ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಹೀಗೆ ಎಲ್ಲಾ ಧರ್ಮಿಷ್ಠರು ರಾಜ್ಯದಲ್ಲಿ ಸುರಕ್ಷಿತರಾಗಿರುತ್ತಾರೆ. ಅವರ ಜೀವ, ಧರ್ಮ, ಆಸ್ತಿಪಾಸ್ತಿಗಳ ಬಗ್ಗೆ ಯಾವುದೇ ಭೀತಿ ಬೇಕಾಗಲ್ಲ ಎಂದು ಭಾರದ್ವಾಜ್ ಜನತೆಗೆ ಭರವಸೆ ನೀಡಿದ್ದಾರೆ.

ಭಾನುವಾರ ರಾತ್ರಿ ಮೈಸೂರು ಮತ್ತು ಭಟ್ಕಳಗಳಲ್ಲಿ ಎರಡು ಚರ್ಚ್‌ಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಈ ಹಿಂದಿನ ಚರ್ಚ್ ದಾಳಿಗಳನ್ನು ನೆನಪಿಸಿದ್ದರು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳಿಂದ ಬಿಜೆಪಿ ಸರಕಾರವು ತೀವ್ರ ಟೀಕೆಗಳನ್ನೆದುರಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ