ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮುಖ್ಯಮಂತ್ರಿಯವರಿಗೆ ಸದಾ ಕುರ್ಚಿಯದ್ದೇ ಚಿಂತೆ: ಮೋಟಮ್ಮ (Motamma | BS Yedyurappa | Sushma Swaraj Hampi Utsav)
Bookmark and Share Feedback Print
 
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಡಳಿತ ವೈಖರಿಯನ್ನು ವಿಶ್ಲೇಷಣೆ ನಡೆಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ರಾಜ್ಯದಲ್ಲಿ ಹಣಕಾಸು ಸ್ಥಿತಿಗತಿ ಚೆನ್ನಾಗಿಲ್ಲ; ಹಾಗಾಗಿ ಮುಖ್ಯಮಂತ್ರಿಗಳಿಗೆ ಸದಾ ಅಭದ್ರತೆಯ ಭಯ ಕಾಡುತ್ತಿದೆ ಎಂದು ಕಿಚ್ಚು ಹಚ್ಚಿದ್ದಾರೆ.

ಬಿಜೆಪಿ ಒಳಜಗಳದಿಂದಾಗಿ ಸರಕಾರ ಯಾವ ಕ್ಷಣದಲ್ಲಾದರೂ ಬೀಳಬಹುದೆಂದು ಆತಂಕದಲ್ಲಿರುವ ಯಡಿಯೂರಪ್ಪನವರಿಗೆ ರೈತರ ಕರೆಗಳಿಗೆ ಓಗೊಡಲು ಸಾಧ್ಯವಾಗುತ್ತಿಲ್ಲ. ಸಂಪುಟ ಸಹೋದ್ಯೋಗಿಗಳು ಸಮರ್ಪಕವಾಗಿ ಕೆಲಸ ಮಾಡಿ ಎಂದು ಹೇಳುವ ಸ್ಥಿತಿಯಲ್ಲೂ ಅವರಿಲ್ಲ. ಅಂತಹ ಛಾತಿ ಅವರಲ್ಲಿದ್ದಿದ್ದರೆ ರಾಜ್ಯ ಈ ರೀತಿಯ ಹೀನಾಯ ಸ್ಥಿತಿಯನ್ನು ತಲುಪುತ್ತಿರಲಿಲ್ಲ ಎಂದರು.

ಆಡಳಿತ ಯಂತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಜನಸಾಮಾನ್ಯರು ಬೇಸತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಲು ಮುಖ್ಯಮಂತ್ರಿಯವರಿಗೆ ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಆರ್ಥಿಕ ದಿವಾಳಿತನ ಎದ್ದು ಕಾಣುತ್ತಿದೆ. ಹಾಗಾಗಿ ಕೂಡಲೇ ವಿಧಾನ ಮಂಡಲದ ಅಧಿವೇಶನವನ್ನು ಕರೆಯಬೇಕು ಎಂದು ಮೋಟಮ್ಮ ಸರಕಾರವನ್ನು ಆಗ್ರಹಿಸಿದ್ದಾರೆ.

ಸುಷ್ಮಾ ದುರಂತ ಸ್ಥಳಕ್ಕೆ ಬರಲಿಲ್ಲ...
ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆಂದು ಹಂಪಿಯವರೆಗೆ ಬಂದಿದ್ದ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಬಳ್ಳಾರಿ ಕಟ್ಟಡ ದುರಂತ ಸ್ಥಳಕ್ಕೆ ಭೇಟಿ ನೀಡದೇ ಇರುವುದನ್ನೂ ಮೋಟಮ್ಮ ಪ್ರಶ್ನಿಸಿದ್ದಾರೆ.

ಹಂಪಿಯಲ್ಲಿನ ಪಟ್ಟಾಭಿಷೇಕ ಮಹೋತ್ಸವಕ್ಕೆ ಹಾಜರಾಗಿರುವ ಸುಷ್ಮಾ ದುರಂತ ಸ್ಥಳಕ್ಕೆ ಬಂದು ಸಂತ್ರಸ್ತರಿಗೆ ಸಾಂತ್ವನ ಹೇಳುವ ಔದಾರ್ಯವನ್ನೂ ತೋರದಿರುವುದಕ್ಕೆ ಅವರು ವಿಷಾದಿಸಿದರು.

ಬಳ್ಳಾರಿಯಲ್ಲಿನ ಹತ್ತಾರು ಕಾರ್ಮಿಕರ ಸಾವಿಗೆ ನೇರ ಹೊಣೆ ಅಲ್ಲಿಯ ಮಹಾನಗರ ಪಾಲಿಕೆ ಎಂದು ಆರೋಪಿಸಿರುವ ಮೋಟಮ್ಮ, ಮೂರು ಅಂತಸ್ತಿನ ಕಟ್ಟಡ ಕಟ್ಟಲು ಪರವಾನಗಿ ಪಡೆದಿದ್ದ ಮಾಲಕರು ಐದಂತಸ್ತಿಗೆ ಏರಿಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಹಾಗಾಗಿ ಕೇವಲ ಕಟ್ಟಡದ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿದರೆ ಸಾಲದು. ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಯೋಜನಾ ಇಲಾಖೆ ಮುಖ್ಯಸ್ಥರನ್ನೂ ಅಮಾನತು ಮಾಡಬೇಕು. ಅವರೂ ಇದಕ್ಕೆ ಜವಾಬ್ದಾರರರು ಎಂದು ಮೋಟಮ್ಮ ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ