ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು: ಸಚಿವ ಪಾಟೀಲ್ (MES | Belagavi | Kannada vedike | Narayana gowda | Patil)
Bookmark and Share Feedback Print
 
ಎಂಇಎಸ್ ಕಾರ್ಯಕರ್ತರು ನಡೆಸುತ್ತಿರುವ ಹೋರಾಟ ನ್ಯಾಯಸಮ್ಮತವಾಗಿರುವುದಾಗಿ ಸಮರ್ಥಿಸಿಕೊಂಡಿರುವ ಮಹಾರಾಷ್ಟ್ರ ಸಚಿವ ಜಯಂತ ಪಾಟೀಲ್, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಆಗ್ರಹಿಸುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯ ತೀವ್ರ ಪ್ರತಿರೋಧದ ನಡುವೆಯೂ ಇಲ್ಲಿನ ಲೇಲೆ ಮೈದಾನದಲ್ಲಿ ಎಂಇಎಸ್ ಕಾರ್ಯಕರ್ತರು ಶುಕ್ರವಾರ ಹಮ್ಮಿಕೊಂಡಿದ್ದ ಮರಾಠಿ ಸೀಮಾ ಪರಿಷತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಪಾಟೀಲ್, ಮರಾಠಿಗರಿಗೆ ಆಗುತ್ತಿರುವ ಅನ್ಯಾಯಕ್ಕಾಗಿ ಎಂಇಎಸ್ ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ ಎಂದರು.

ಅಲ್ಲದೇ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಕನ್ನಡ ನೆಲದಲ್ಲಿಯೇ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸಚಿವರು ಕಗ್ಗಂಟಾಗಿದ್ದ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದಂತಾಗಿದೆ.

ತರಾತುರಿಯಲ್ಲಿ ಸಮಾವೇಶ ಮುಕ್ತಾಯ- ಎಂಇಎಸ್‌ನಿಂದ ಉದ್ಧಟತನದ ನಿರ್ಣಯ: ಕರವೇ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮರಾಠಿ ಸೀಮಾ ಪರಿಷತ್ ಸಮಾವೇಶವನ್ನು ತರಾತುರಿಯಲ್ಲಿ ಮುಕ್ತಾಯಗೊಳಿಸಿತು. ಸಮಾವೇಶದಲ್ಲಿ ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿದ್ದು, ಬೆಳಗಾವಿಗೆ ಮಹಾರಾಷ್ಟ್ರ ವಿಶೇಷ ನೆರವು ನೀಡಬೇಕೆಂದು ಎಂಇಎಸ್ ಮುಖಂಡ ದೀಪಕ್ ದಳವಿ ನೇತೃತ್ವದಲ್ಲಿ ಉದ್ಧಟತನದ ನಿರ್ಣಯವನ್ನು ಕೈಗೊಂಡಿರುವುದು ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ವೋಟ್ ಬ್ಯಾಂಕ್‌ಗಾಗಿ ವಿವಾದಿತ ಹೇಳಿಕೆ-ಕರವೇ: ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಮಹಾರಾಷ್ಟ್ರದ ಸಚಿವ ಜಯಂತ ಪಾಟೀಲ್ ವಿವಾದಿತ ಹೇಳಿಕೆಯನ್ನು ನೀಡಿರುವುದಾಗಿ ಕಿಡಿಕಾರಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯದ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರ ಪಾಲಿಗೆ ಹೋಗಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಗಡಿವಿಚಾರದಲ್ಲಿ ಮೃದುಧೋರಣೆ ಇಲ್ಲ-ಡಿವಿಎಸ್: ಬೆಳಗಾವಿ ಗಡಿ ವಿವಾದ ಕುರಿತಂತೆ ಸರ್ಕಾರ ಮೃದು ಧೋರಣೆ ಹೊಂದಿಲ್ಲ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಎಂಇಎಸ್ ಪುಂಡಾಟಿಕೆಗೆ ಮಣಿಯಬಾರದು-ದತ್ತ: ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ. ಅಲ್ಲದೇ, ಗಡಿವಿವಾದ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರವೂ ಕೂಡ ವಿಫಲವಾಗಿದೆ. ಏನೇ ಆದರೂ ಎಂಇಎಸ್ ಪುಂಡಾಟಿಕೆಗೆ ಸರ್ಕಾರ ಮಣಿಯಬಾರದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ