ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೆರಳಿದ ಗೌಡ; ಸರಕಾರ-ನೈಸ್ ವಿರುದ್ಧ ಮತ್ತೆ ಬೀದಿಗಿಳಿಯುತ್ತೇನೆ (NICE | BMIC | Karnataka | HD Deve Gowda)
Bookmark and Share Feedback Print
 
ಬಿಎಂಐಸಿ ಯೋಜನೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ಕುರಿತು ಮುಖ್ಯಮಂತ್ರಿ ಜತೆಗೆ ಇತ್ತೀಚೆಗಷ್ಟೇ ನಡೆಸಿದ ಮಾತುಕತೆಯಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಂದಿನ ವಾರದಿಂದ ಮತ್ತೆ ನೈಸ್-ಸರಕಾರದ ವಿರುದ್ಧ ಹೋರಾಟ ಆರಂಭಿಸಲಿದ್ದೇನೆ ಎಂದು ಘೋಷಿಸಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಬಿಜೆಪಿ ಸರಕಾರವು ಬಿಎಂಐಸಿ ಯೋಜನೆಗೆ ಹೆಚ್ಚುವರಿ ಜಮೀನು ನೀಡಿದೆ. ಅದನ್ನು ತಕ್ಷಣವೇ ಹಿಂದಕ್ಕೆ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ರೈತರು ಮತ್ತು ಎಡಪಕ್ಷಗಳೊಂದಿಗೆ ಜೆಡಿಎಸ್ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
NRB


ಮೂಲ ಒಪ್ಪಂದಕ್ಕಿಂತ ಹೆಚ್ಚು ಜಮೀನನ್ನು ನೈಸ್ ಯೋಜನೆಗೆ ನೀಡಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಆದೇಶವನ್ನು ಉಲ್ಲಂಘಿಸಿರುವ ಸರಕಾರ ಕೆಐಎಡಿಬಿ ಮೂಲಕ ಜಮೀನು ಹಸ್ತಾಂತರಿಸಿದೆ. ಇದನ್ನು ನಾನು ಖಂಡಿಸಿ ಮತ್ತೆ ಹೋರಾಟ ಆರಂಭಿಸುತ್ತೇನೆ ಎಂದು ಗೌಡರು ಸರಕಾರದ ವಿರುದ್ಧ ಮತ್ತೆ ತೊಡೆ ತಟ್ಟಿದ್ದಾರೆ.

ಯಾವ ರೀತಿ ಹೋರಾಟ ನಡೆಸುವುದೆಂದು ಮುಂದಿನ ವಾರ ರೈತರು ಮತ್ತು ಎಡಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ ನಂತರ ತೀರ್ಮಾನಿಸಲಾಗುತ್ತದೆ. ಜೆಡಿಎಸ್ ಕಾರ್ಯಕರ್ತರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ನಾವು ಶಾಂತಿಯುತ ಹೋರಾಟ ನಡೆಸಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಭೀತಿ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನೈಸ್ ಕಂಪನಿಗೆ ಪ್ರತೀ ದಿನ 35 ಲಕ್ಷ ರೂಪಾಯಿ ಟೋಲ್ ಮೂಲಕವೇ ಸಂಗ್ರಹವಾಗುತ್ತಿದ್ದರೂ ರೈತರ ಜಮೀನು ಪಡೆದುಕೊಂಡೇ ಯೋಜನೆ ಪೂರ್ತಿಗೊಳಿಸಬೇಕೆಂಬ ತೆವಲು. ಸರಕಾರದ ಈ ದುರುದ್ದೇಶವನ್ನು ಈಡೇರಲು ನಾನು ಅವಕಾಶ ನೀಡುವುದಿಲ್ಲ ಎಂದು ಗೌಡರು ಗುಡುಗಿದ್ದಾರೆ.

ಇತ್ತೀಚೆಗಷ್ಟೇ ನೈಸ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದ ಜೆಡಿಎಸ್ ವರಿಷ್ಠ ದೇವೇಗೌಡ, ಮಾತುಕತೆ ಸಮಾಧಾನ ತಂದಿದೆ ಎಂದಿದ್ದರು. ಆದರೆ ಆ ಮಾತನ್ನು ಸರಕಾರ ಉಳಿಸಿಕೊಂಡಿಲ್ಲ, ಹಾಗಾಗಿ ಮತ್ತೆ ಬೀದಿಗಿಳಿಯುತ್ತಿದ್ದೇನೆ ಎಂದು ಗೌಡರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ