ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇಂತಹ ಮತ್ತೊಬ್ಬ ಯಡಿಯೂರಪ್ಪ ಕರ್ನಾಟಕಕ್ಕೆ ಸಿಗಲ್ಲ: ಈಶ್ವರಪ್ಪ (KS Eshwarappa | BS Yedyurappa | BJP | Karnataka)
Bookmark and Share Feedback Print
 
Eshwarappa
NRB
ನಾನು ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಣ್ಣ-ತಮ್ಮಂದಿರಂತೆ. ಪಕ್ಷದ ವಿಚಾರ, ನಮ್ಮೊಳಗಿನ ತಪ್ಪುಗಳ ವಿಚಾರ ಹಲವಾರು ಬಾರಿ ಕಿತ್ತಾಡಿಕೊಂಡಿದ್ದೇವೆ. ಈ ಹಿಂದೆ ಇದ್ದ ಸಣ್ಣ ಪ್ರಮಾಣದ ಭಿನ್ನಮತ ಒಂದು ಕೆಟ್ಟ ಕನಸು. ನಾನು ಈ ಹಂತಕ್ಕೆ ಬೆಳೆದು ನಿಲ್ಲಲು ಅವರೂ ಕಾರಣರು ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮತ್ತೊಬ್ಬ ಯಡಿಯೂರಪ್ಪನನ್ನು ಕರ್ನಾಟಕಕ್ಕೆ ತರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗಷ್ಟೇ ಸಚಿವ ಸ್ಥಾನವನ್ನು ತೊರೆದು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಆರಿಸಿಕೊಂಡಿದ್ದ ಈಶ್ವರಪ್ಪನವರು ಭಾನುವಾರ ಮಾಧ್ಯಮಗಳ ಜತೆ ಲೋಕಾಭಿರಾಮ, ರಾಜಕೀಯ ಮಾತುಕತೆ ನಡೆಸುತ್ತಾ ಕಳೆದ ದಿನಗಳು ಮತ್ತು ಮುಂದಿನ ದಿನಗಳ ಬಗ್ಗೆ ವಿವರಣೆ ನೀಡಿದರು.

ನಾನು ಅವರೂ ಅಣ್ಣ-ತಮ್ಮಂದಿರಂತೆ...
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ನನ್ನ ನಡುವೆ ಸಣ್ಣ ಪ್ರಮಾಣದ ಭಿನ್ನಮತ ಇದ್ದದ್ದು ಹೌದು. ಅದೊಂದು ಕೆಟ್ಟ ಕನಸು. ಪ್ರಸಕ್ತ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಮತವಿಲ್ಲ. ಅವರ ನಾಯಕತ್ವದ ವಿರುದ್ಧ ಯಾವತ್ತೂ ನಾನು ಮಾತನಾಡಿಲ್ಲ. ಆದರೆ ಅವರಲ್ಲಿನ ಲೋಪದೋಷಗಳ ಬಗ್ಗೆ ಬೆಟ್ಟು ಮಾಡಿ ತೋರಿಸಿದ್ದೇನೆ. ಅವರಿಗೆ ಮತ್ತು ಪಕ್ಷಕ್ಕೆ ಒಳ್ಳೆಯದಾಗಬೇಕೆಂಬುದು ನನ್ನ ಉದ್ದೇಶವಾಗಿತ್ತು ಎಂದು ಈಶ್ವರಪ್ಪ ತಿಳಿಸಿದರು.

ಅವರ ಹೋರಾಟದ ಜೀವನವನ್ನು ನಾನು ನೋಡುತ್ತಲೇ ಬಂದಿದ್ದೇನೆ. ಅಂತವರ ವಿರುದ್ಧ ಆಪಾದನೆ ಮಾಡಿದಾಗ ನನಗೆ ಸಹಿಸಲು ಸಾಧ್ಯವಿಲ್ಲ. ಹಾಗೆಂದು ಅವರು ಪರಿಪೂರ್ಣ ಮುಖ್ಯಮಂತ್ರಿಯೆಂದು ನಾನು ಹೇಳಲಾರೆ. ಆದರೆ ದೇಶದ ನಂ.1 ಸಿಎಂ ಆಗುವ ಸಾಮರ್ಥ್ಯ ಅವರಲ್ಲಿದೆ. ರೈತರ ಬಗೆಗಿನ ಅವರ ಕಾಳಜಿ ನಿಜಕ್ಕೂ ಎಲ್ಲರಿಗೂ ಆದರ್ಶ ಪ್ರಾಯ. ಅವರಂತಹ ಇನ್ನೊಬ್ಬ ವ್ಯಕ್ತಿ ಕರ್ನಾಟಕ್ಕೆ ಸಿಗುವುದು ಅಸಾಧ್ಯ ಎಂದರು.
Yediyurappa
NRB

ಭಿನ್ನಾಭಿಪ್ರಾಯಗಳು ಅಣ್ಣ-ತಮ್ಮಂದಿರಲ್ಲಿ ಬಂದು ಹೋದಂತೆ ನಮ್ಮಲ್ಲೂ ಇದ್ದವು. ಆದರೆ ಅದನ್ನೆಲ್ಲ ನಾವು ಆಯಾ ಸಂದರ್ಭಗಳಲ್ಲೇ ಮರೆತು ಬಿಡುತ್ತಿದ್ದೆವು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇತ್ತೀಚಿನ ಪಕ್ಷದೊಳಗಿನ ಆಂತರಿಕ ಭಿನ್ನಮತದ ನಂತರ ಅವರೂ ಬದಲಾಗಿದ್ದಾರೆ. ಶಾಸಕರು, ಸಚಿವರು ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ ಎಂದು ಈಶ್ವರಪ್ಪ ವಿವರಣೆ ನೀಡಿದರು.

ಮುಂದಿನ ಮುಖ್ಯಮಂತ್ರಿ ನಾನಲ್ಲ...
ಬಿಜೆಪಿ ಅಧ್ಯಕ್ಷರಾಗಿದ್ದು ಮುಂದಿನ ಮುಖ್ಯಮಂತ್ರಿಯಾಗಬೇಕೆಂಬ ದೂರಾಲೋಚನೆಯಿಂದಲೇ ಎಂಬ ಪ್ರಶ್ನೆಗವರು, ಇಲ್ಲ; ಅಂತಹ ಅವಕಾಶ ನನಗೆ ಸಿಕ್ಕಿದರೂ ಬೇಡ. ನನಗಿಂತಲೂ ಹಿರಿಯರು, ಅನುಭವಿಗಳು ಪಕ್ಷದಲ್ಲಿದ್ದಾರೆ. ಅಷ್ಟಕ್ಕೂ ಬಿಜೆಪಿಯಲ್ಲಿ ಅಧ್ಯಕ್ಷರಾದವರಿಗೆ ಸಂಘಟನೆಯೇ ಗುರಿ ಹೊರತು ಅಧಿಕಾರವಲ್ಲ ಎಂದರು.

ಅಲ್ಲದೆ ಒಂದೇ ಜಿಲ್ಲೆಯ ಇಬ್ಬರು ನಾಯಕರು ಉನ್ನತ ಸ್ಥಾನಗಳಲ್ಲಿರುವುದರಿಂದ ಪರ್ಯಾಯ ನಾಯಕತ್ವ ಸೃಷ್ಟಿಗೆ ಯತ್ನಿಸಲಾಗಿದೆ ಎಂಬುದನ್ನೂ ಅವರು ಒಪ್ಪಿಕೊಳ್ಳದೆ, ಮುಂದಿನ ಮೂರು ವರ್ಷಗಳ ಕಾಲವೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದರು.

ಶಾಸಕ-ಸಚಿವರ ಬಗ್ಗೆ...
ಬಹುತೇಕ ಎಲ್ಲರೂ ಅತ್ಯುತ್ತಮವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕೆಲವು ಸಚಿವರಲ್ಲಿ ಸೋಮಾರಿತನವಿರುವುದು ಕಂಡು ಬಂದಿದೆ. ಅವರಿಗೆ ಕರೆದು ಬುದ್ಧಿವಾದ ಹೇಳುತ್ತೇವೆ ಎಂದರು ಈಶ್ವರಪ್ಪ.

ನೀವು ಬಂದ ಮೇಲೂ ಆತಂಕ ಹುಟ್ಟಿಸುವ ಆಂತರಿಕ ಬೆಳವಣಿಗೆಗಳು ಮುಂದುವರಿದೇ ಇದೆಯಲ್ಲಾ ಎಂಬ ಪ್ರಶ್ನೆಗವರು, ಅದು ಭಿನ್ನಮತ ಅಥವಾ ಅತೃಪ್ತಿಗಳಲ್ಲ; ಅವಕಾಶಗಳಿಗಾಗಿ ಸಂಘಟಿತರಾಗುತ್ತಿದ್ದಾರೆ. ಕೆಲವು ದಲಿತ ಶಾಸಕರು ತಮಗೂ ಅವಕಾಶಗಳನ್ನು ನೀಡಿ ಎನ್ನುತ್ತಿದ್ದಾರೆ, ಅಷ್ಟೇ ಎಂದರು.
ಸಂಬಂಧಿತ ಮಾಹಿತಿ ಹುಡುಕಿ