ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಿಜ ಜೀವನದಲ್ಲೂ ರಿಯಲ್ ಹೀರೋ ಆದ ಜಗ್ಗೇಶ್! (Kannada cinema | Jaggesh | Railway | Hospital | Bangalore)
Bookmark and Share Feedback Print
 
ನಗರದ ರೈಲು ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಅಡಿಯಿಂದ ಆರ್ತನಾದವೊಂದು ಕೇಳಿ ಬರುತ್ತಿತ್ತು. ಆ ಸಮಯಕ್ಕೆ ಸರಿಯಾಗಿ ನಟ ಜಗ್ಗೇಶ್ ಆಗಮಿಸುತ್ತಾರೆ. ರೈಲಿನ ಕೆಳಗೆ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಗಮನಿಸುತ್ತಾರೆ. ಅಧಿಕಾರಿಗಳನ್ನು ಕರೆದಾಗ ಅವರಿಂದ ಯಾವುದೇ ಸಹಾಯ ದೊರೆಯಲಿಲ್ಲ. ಸ್ವತಃ ತನ್ನ ಅಂಗರಕ್ಷಕನನ್ನೇ ರೈಲಿನ ಕೆಳ ಭಾಗಕ್ಕೆ ಇಳಿಸಿ ಸಿಕ್ಕಿ ಬಿದ್ದಿರುವ ವ್ಯಕ್ತಿಯನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿ ದಾಖಲಿಸುತ್ತಾರೆ...ಇದು ಸಿನಿಮಾ ಚಿತ್ರೀಕರಣವಲ್ಲ. ಕಳೆದ ರಾತ್ರಿ ನಗರದ ರೈಲು ನಿಲ್ದಾಣದಲ್ಲಿ ನಡೆದ ನೈಜ ಘಟನೆ!.

ಕಳೆದ ರಾತ್ರಿ ಸಚಿವ ಆರ್.ಅಶೋಕ್ ಬಳ್ಳಾರಿಗೆ ಪ್ರಯಾಣ ಬೆಳೆಸಲು ನಗರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಬೀಳ್ಕೊಡಲು ನಟ ಜಗ್ಗೇಶ್ ಕೂಡ ಆಗಮಿಸಿದ್ದರು. ಸಚಿವರನ್ನು ರೈಲಿಗೆ ಹತ್ತಿಸಿ ಕಳುಹಿಸುವ ವೇಳೆ ವ್ಯಕ್ತಿಯೊಬ್ಬನ ಆರ್ತನಾದ ಜಗ್ಗೇಶ್ ಅವರ ಕಿವಿಗೆ ಬಿದ್ದಿತ್ತು. ತಕ್ಷಣ ರೈಲ್ವೆ ಅಧಿಕಾರಿಗಳನ್ನು ಕರೆದು ಆತನನ್ನು ರಕ್ಷಿಸುವಂತೆ ಜಗ್ಗೇಶ್ ಹೇಳಿದರು. ಇಲ್ಲಿ ಇದೆಲ್ಲ ಮಾಮೂಲಿ ಎಂಬ ಉಡಾಫೆಯ ಉತ್ತರ ನೀಡಿದ ಅಧಿಕಾರಿಗಳು ಸಹಾಯಕ್ಕೆ ಬರಲಿಲ್ಲ. ಕೊನೆಗೆ ತಮ್ಮ ಅಂಗರಕ್ಷಕ ಮತ್ತು ತಾವೇ ಸೇರಿಕೊಂಡು ಆ ವ್ಯಕ್ತಿಯನ್ನು ಹೊರತಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸುವ ಮೂಲಕ ನಿಜ ಜೀವನದಲ್ಲಿ ಹೀರೋ ಎನ್ನಿಸಿಕೊಂಡರು.

ಆ ವ್ಯಕ್ತಿಯ ಒಂದು ಕಾಲು ಮುರಿದಿದ್ದು, ಜೀವಕ್ಕೆ ಅಪಾಯ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಜಗ್ಗೇಶ್ ರಕ್ಷಿಸಿದ ವ್ಯಕ್ತಿ ಶ್ರೀರಾಂಪುರದ ನಿವಾಸಿ ವಿಜಯಕುಮಾರ್(33) ಎಂದು ಗುರುತಿಸಲಾಗಿದೆ. ಮಂಗಳವಾರ ಕೂಡ ಜಗ್ಗೇಶ್ ಆಸ್ಪತ್ರೆಗೆ ಭೇಟಿ ನೀಡಿ ವಿಜಯ್ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಅಲ್ಲದೇ, ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ರವಾನಿಸುವುದಾಗಿ ಜಗ್ಗೇಶ್ ಸಂಜೆ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ