ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ಸಮರ್ಥ; ದುರ್ಬಲ ರಾಜ್ಯಪಾಲನಲ್ಲ: ಭಾರದ್ವಾಜ್ ಸ್ಪಷ್ಟನೆ (Karnataka | HR Bharadwaj | BJP govt | BS Yediyurappa)
Bookmark and Share Feedback Print
 
ಸಮರ್ಥವಾಗಿ ಮತ್ತು ಕಾನೂನು ಬದ್ಧವಾಗಿ ಅಧಿಕಾರ ಚಲಾಯಿಸುತ್ತೇನೆ. ಯಾವುದೇ ಆಸೆ ಆಮಿಷಗಳಿಗೆ ಬಗ್ಗುವವನು ನಾನಲ್ಲ ಎಂದು ಪರೋಕ್ಷವಾಗಿ ರಾಜ್ಯ ಸರಕಾರದ ನೀತಿಗೆ ವಿರೋಧ ವ್ಯಕ್ತಪಡಿಸಿರುವ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ನಾನು ದುರ್ಬಲ ರಾಜ್ಯಪಾಲನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಅಲ್ಮಾಸ್ ಎಜುಕೇಶನ್ ಟ್ರಸ್ಟ್ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ರಾಜ್ಯಪಾಲರು, ರಾಜ್ಯದಲ್ಲಿ ಕೋಮುಗಲಭೆಗಳು ಎಗ್ಗಿಲ್ಲದೆ ಮುಂದುವರಿದಿವೆ; ಇದನ್ನು ತಡೆಯಲು ಅಗತ್ಯ ಕಠಿಣ ಕ್ರಮಗಳನ್ನು ಸರಕಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಕಳೆದ ಕೆಲವು ಸಮಯಗಳಿಂದ ರಾಜ್ಯದಲ್ಲಿ ಕೋಮು ಸೌಹಾರ್ದತೆಯ ಕೊರತೆ ಕಾಣುತ್ತಿದೆ. ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ದ್ವೇಷಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ರೀತಿ ಸಮಾಜದಲ್ಲಿ ವಿಷಬೀಜ ಬಿತ್ತುವವರನ್ನು ಕಾನೂನಿನ ಕುಣಿಕೆಗೆ ತರಬೇಕು ಎಂದು ಸರಕಾರವನ್ನುದ್ದೇಶಿ ಹೇಳಿದರು.

ಸ್ವಾತಂತ್ರ್ಯ ಹೋರಾಟ ಮತ್ತು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಮುಸ್ಲಿಮರ ಪಾತ್ರ ಗಣನೀಯ. ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ಅವರು ಮಾತನಾಡುವ ಉರ್ದು ಭಾಷೆ ಕೇವಲ ಒಂದು ಧರ್ಮದ ಭಾಷೆಯಾಗಿ ಉಳಿದಿಲ್ಲ. ಅದು ಹಿಂದೂ-ಮುಸ್ಲಿಮರ ನಡುವಿನ ಸಂಪರ್ಕ ಸೇತುವೆ ಎಂದು ರಾಜ್ಯಪಾಲರು ಇದೇ ಸಂದರ್ಭದಲ್ಲಿ ಬಣ್ಣಿಸಿದರು.

ಜಾತ್ಯತೀತತೆ ಮತ್ತು ಸೌಹಾರ್ದತೆ ಉಳಿಸಿಕೊಳ್ಳುವ ಉದ್ದೇಶದಿಂದಲೇ ನಮ್ಮ ಸಂವಿಧಾನದಲ್ಲಿ ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಅಲ್ಪಸಂಖ್ಯಾತರಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಈ ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ