ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಾ.30ರೊಳಗೆ ಚುನಾವಣೆ ನಡೆಸಿ: ಸರ್ಕಾರಕ್ಕೆ ಹೈಕೋರ್ಟ್ (High court | BBMP | BJP | Supreme court | yeddyurappa)
Bookmark and Share Feedback Print
 
ಕಾನೂನು ಸಮರಕ್ಕೆ ಕಾರಣವಾಗಿದ್ದ ಬಿಬಿಎಂಪಿ ಚುನಾವಣೆ ಪ್ರಕರಣದ ಕುರಿತಂತೆ ರಾಜ್ಯ ಹೈಕೋರ್ಟ್, ಮಾರ್ಚ್ 30ರೊಳಗೆ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ಆದೇಶ ನೀಡುವ ಮೂಲಕ ಗುರುವಾರ ಅಂತಿಮ ತೀರ್ಪು ನೀಡುವ ಮೂಲಕ ರಾಜ್ಯ ಸರ್ಕಾರ ಮತ್ತೊಮ್ಮೆ ಹಿನ್ನೆಡೆ ಅನುಭವಿಸಿದಂತಾಗಿದೆ.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಸರ್ಕಾರ ಚುನಾವಣೆ ನಡೆಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿತ್ತು. ಸರ್ಕಾರದ ಮನವಿಯನ್ನು ಪರಿಶೀಲಿಸಿದ ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಅಂತಿಮ ತೀರ್ಪು ಪ್ರಕಟಿಸುವುದಾಗಿ ಹೇಳಿ ವಿಚಾರಣೆ ಮುಂದೂಡಿತ್ತು.

ಇಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ಯಾವುದೇ ಕಾರಣಕ್ಕೂ ಚುನಾವಣೆ ವಿಳಂಬವಾಗಬಾರದು ಎಂದು ಗಂಭೀರ ಎಚ್ಚರಿಕೆಯನ್ನು ನೀಡಿದೆ. ಫೆ.20ರೊಳಗೆ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದೆ.

ಅಲ್ಲದೇ, ಫೆ.20ರೊಳಗೆ ಬಿಬಿಎಂಪಿ ಚುನಾವಣೆಯ ಅಧಿಸೂಚನೆ ಹೊರಡಿಸಬೇಕೆಂದು ಆದೇಶ ನೀಡಿರುವ ಹೈಕೋರ್ಟ್, ಸರ್ಕಾರ ಚುನಾವಣಾ ಆಯೋಗಕ್ಕೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಬೇಕೆಂದು ತಿಳಿಸಿದೆ.

ಬಿಬಿಎಂಪಿ ಚುನಾವಣೆಯನ್ನು ರದ್ದು ಮಾಡಲು ನಿಮಗೆ ಅನುಮತಿ ಕೊಟ್ಟವರು ಯಾರು?ಎಂದು ಹೈಕೋರ್ಟ್ ನಿನ್ನೆ ಚುನಾವಣಾ ಆಯೋಗ ಮತ್ತು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಆಯೋಗ ಪತ್ರ ವ್ಯವಹಾರವನ್ನು ತುಂಬಾ ಚಾಣಾಕ್ಷತನದಿಂದ ನಡೆಸಿರುವುದು ನಮಗೂ ತಿಳಿಯುತ್ತದೆ. ಈ ಪತ್ರಗಳ ಆಧಾರದ ಮೇಲೆ ಚುನಾವಣೆಯನ್ನೇನೊ ವಾಪಸು ಪಡೆದಿದ್ದೀರಿ. ಆದರೆ ಇವುಗಳಲ್ಲಿ ಯಾರ ಸಹಿಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಈ ಪ್ರಕರಣವನ್ನು ಗಂಭೀರವಾಗಿ ಪರಿಣಿಸುವುದಾಗಿ ತಿಳಿಸಿತ್ತು.

ಚುನಾವಣೆ ನಡೆಸುವುದು ಅನಿವಾರ್ಯ-ಹಾರ್ನಳ್ಳಿ: ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಪರೀಕ್ಷಾ ಕಾಲವಾಗಿದ್ದರಿಂದ ಚುನಾವಣೆ ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಹೈಕೋರ್ಟ್ ಇದೀಗ ಚುನಾವಣೆ ನಡೆಸುವಂತೆ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ