ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯುವ ಕಾಂಗ್ರೆಸಿಗರಿಂದ ಮುತಾಲಿಕ್ ಮುಖಕ್ಕೆ ಮಸಿ (Congress | Muthalik | Sri rama sene | Valentine's Day)
Bookmark and Share Feedback Print
 
NRB
ಪ್ರೇಮಿಗಳ ದಿನಾಚರಣೆಗೆ ಅಡ್ಡಿ ಪಡಿಸುವುದಾಗಿ ಬೆದರಿಕೆ ಹಾಕಿದ್ದ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್ ಅವರ ಮೇಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಠಾತ್ ದಾಳಿ ನಡೆಸಿ ಮುಖಕ್ಕೆ ಮಸಿ ಬಳಿದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಗರದ ಟೌನ್ ಹಾಲ್ ಸಮೀಪದ ಸಂಸ ಬಯಲುರಂಗ ಮಂದಿರದಲ್ಲಿ ನಡೆದಿದೆ.

ಗುರುವಾರ ಸಂಜೆ ರಂಗಮಂದಿರದಲ್ಲಿ ಪ್ರೇಮಿಗಳ ದಿನಾಚರಣೆ ಕುರಿತು ಖಾಸಗಿ ಚಾನೆಲ್‌ವೊಂದು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ಬಿಸಿಯೇರಿದ ಚರ್ಚೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತ್ತು. ತದನಂತರ ಪೂರ್ವ ಸಿದ್ಧತೆಯೊಂದಿಗೆ ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದು ಹಿಗ್ಗಾಮುಗ್ಗಾ ಎಳೆದಾಡಿದ ಪ್ರಸಂಗ ನಡೆಯಿತು.

ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಡಿಸುವುದಾಗಿ ಘೋಷಿಸಿರುವ ಪ್ರಮೋದ್ ಮುತಾಲಿಕ್ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪೊಲೀಸರು ಲಘ ಲಾಠಿ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ಶ್ರೀರಾಮಸೇನೆ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು.

ಘಟನೆಗೆ ಸಂಬಂಧಿಸಿದಂತೆ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದ ಯುವಕ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀರಾಮಸೇನೆಯಿಂದ ಬಂದ್‌ಗೆ ಕರೆ: ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ ಅವರ ಮುಖಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮಸಿ ಬಳಿದಿರುವುದನ್ನು ತೀವ್ರವಾಗಿ ಖಂಡಿಸಿರುವ ಸಂಘಟನೆ ಫೆ.14ರಂದು ಬಿಜಾಪುರ, ಸಿಂಧಗಿ ಬಂದ್‌ಗೆ ಕರೆ ನೀಡಿದೆ.

ಬಸ್‌ಗೆ ಬೆಂಕಿ: ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆಯಿಂದ ಕೆರಳಿರುವ ಶ್ರೀರಾಮಸೇನೆಯ ಕಾರ್ಯಕರ್ತರು ಧಾರವಾಡದ ಬಸ್ ನಿಲ್ದಾಣದ ಸಮೀಪ ಇರುವ ಕಾಂಗ್ರೆಸ್ ಕಚೇರಿಗೆ ಕಲ್ಲು ಎಸೆದಿರುವ ಘಟನೆ ನಡೆದಿದೆ. ಮತ್ತೊಂದೆಡೆ ನವಲಗುಂದದಲ್ಲಿ ಸರ್ಕಾರಿ ಬಸ್‌ವೊಂದಕ್ಕೆ ಬೆಂಕಿ ಹಚ್ಚಿದ್ದು, ಪ್ರಯಾಣಿಕರೆಲ್ಲ ಅಪಾಯದಿಂದ ಪಾರಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಗೂಂಡಾಗಿರಿಗೆ ತಕ್ಕ ಉತ್ತರ-ಮುತಾಲಿಕ್: ಇದು ಕಾಂಗ್ರೆಸ್ಸಿಗರ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಲ್ಲದೇ ಈ ಗೂಂಡಾಗಳಿಗೆ ಹಿಂದೂ ಸಮಾಜವೇ ತಕ್ಕ ಉತ್ತರ ನೀಡುತ್ತದೆ. ಯಾವುದೇ ಕಾರಣಕ್ಕೂ ನಾವು ಅವರನ್ನು ಬಿಡುವುದಿಲ್ಲ. ಬೀದಿ, ಬೀದಿಯಲ್ಲಿ ಅಟ್ಟಾಡಿಸಿ ಹೊಡೆಯುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಘಟನೆ ಕುರಿತಂತೆ ಟಿವಿ9ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕಿಡಿಕಾರಿದ್ದಾರೆ.

ಇದು ಪ್ರಮೋದ್ ಮುತಾಲಿಕ್ ಮೇಲೆ ನಡೆಸಿದ ದಾಳಿಯಲ್ಲ, ಹಿಂದೂ ಸಮಾಜದ ಮೇಲೆಯೇ ಯುವ ಕಾಂಗ್ರೆಸ್ಸಿಗರು ನಡೆಸಿದ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ