ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಮಸಿ ಘಟನೆ: ಶ್ರೀರಾಮಸೇನೆ ರಾಜ್ಯ ಬಂದ್‌‌ಗೆ ಮಿಶ್ರಪ್ರತಿಕ್ರಿಯೆ (Sri rama sene | Karnataka | Muthalik | Ballary | BJP)
Bookmark and Share Feedback Print
 
ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಅವರ ಮುಖಕ್ಕೆ ಮಸಿ ಬಳಿದಿರುವುದನ್ನು ಖಂಡಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವಡೆ ಬಸ್‌ಗೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಬಳ್ಳಾರಿ ನಗರದ ರಾಯಲ್ ವೃತ್ತದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು, ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಿದರು. ಘಟನೆಗೆ ಸಂಬಂಧಿಸಿದಂತೆ 35ಮಂದಿ ಶ್ರೀರಾಮಸೇನೆಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ.

ಅದೇ ರೀತಿ ಬಿಜಾಪುರ, ಸಿಂಧಗಿ, ಇಂಡಿಗಳಲ್ಲಿ ಸೇನೆಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ವಾಹನ ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಗಾವಿಯ ನವಲಗುಂದದಲ್ಲಿ ಖಾಸಗಿ ಹೊಟೇಲ್‌ವೊಂದರ ಮೇಲೆ ಸೇನೆಯ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಮಂಗಳೂರು-ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ: ಶ್ರೀರಾಮಸೇನೆಯ ಬಂದ್ ಕರೆಯ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರಿನ ಕೂಳೂರು, ಕಾವೂರಿನಲ್ಲಿ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಉಡುಪಿಯಲ್ಲಿನ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ.

ಇನ್ನುಳಿದಂತೆ ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆಯ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವಡೆ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡುವಂತೆ ಒತ್ತಾಯಿಸಿದ್ದು, ಸೇನೆಯ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜನಜೀವನ ಎಂದಿನಂತೆ ಮುಂದುವರಿದಿದೆ.

ಶಿವಮೊಗ್ಗ, ದಾವಣಗೆರೆಗಳಲ್ಲಿ ಬಂದ್ ಬಿಸಿ ಹೆಚ್ಚಾಗಿ ತಟ್ಟಿಲ್ಲ. ಬಸ್ ಸಂಚಾರ, ಶಾಲಾ-ಕಾಲೇಜು ಎಂದಿನಂತೆ ನಡೆಯುತ್ತಿದ್ದು, ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ