ನೈಸ್ ಯೋಜನೆಗಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಸರ್ಕಾರದ ಧೋರಣೆ ವಿರುದ್ಧ ರೈತರಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೋರಾಟ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ.
ನೈಸ್ ವಿರುದ್ಧದ ಹೋರಾಟ ಕೈಬಿಡಿ ಎಂದು ಗೌಡರಲ್ಲಿ ಮನವಿ ಮಾಡಿರುವ ಮುಖ್ಯಮಂತ್ರಿಗಳು, ನೀವು ಹಿರಿಯರು ರಾಜ್ಯದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಮಾತುಕತೆ ನಡೆಸೋಣ ಬನ್ನಿ ಎಂದು ಮುಕ್ತವಾಗಿ ಆಹ್ವಾನಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವಿಷಯದಲ್ಲಿ ಅನ್ಯಾಯವಾಗಿದ್ದರೆ, ಮಾತುಕತೆ ಮೂಲಕ ಪರಿಹರಿಸಿಕೊಳ್ಳೋಣ. ಹೋರಾಟ ನಡೆಸುವುದನ್ನು ಕೈಬಿಟ್ಟು ಸರ್ಕಾರದೊಂದಿಗೆ ಮಾತುಕತೆಗೆ ಬನ್ನಿ ಎಂದು ತಿಳಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿಯೇ ಅಪಪ್ರಚಾರ ಮಾಡಿ ತೃಪ್ತಿ ಸಿಗುತ್ತದೆ ಎಂದಾದರೆ ನನ್ನ ಅಭ್ಯಂತರವಿಲ್ಲ. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ, ಅವರ ಸಮಸ್ಯೆ ಬಗೆಹರಿಯಬೇಕು ಎಂದಾದರೆ ಮಾತಾಡೋಣ ಬನ್ನಿ ಎಂದು ಗೌಡರನ್ನು ವಿನಂತಿಸಿಕೊಂಡಿದ್ದಾರೆ.
ರೈತರ ಕೃಷಿ ಭೂಮಿ ವಶ ಸೇರಿದಂತೆ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ದೇವೇಗೌಡರು ಇಂದು ನಗರದ ಹೊರವಲಯವಾದ ಹೆಮ್ಮಿಗೆಪುರದಲ್ಲಿ ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದ 26ಜಿಲ್ಲೆಗಳಲ್ಲಿ ರೈತರ ಜಾಗೃತಿಗಾಗಿ ಪ್ರವಾಸ ಕೈಗೊಳ್ಳುವುದಾಗಿ ಈ ಮೊದಲೇ ಘೋಷಿಸಿದ್ದರು.