ಬಿಬಿಎಂಪಿ ಚುನಾವಣೆಯನ್ನು ಮಾರ್ಚ್ 30ರೊಳಗೆ ನಡೆಸಬೇಕೆಂದು ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮತ್ತೊಮ್ಮೆ ರಾಜ್ಯ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಬಿಬಿಎಂಪಿ ಚುನಾವಣೆ ನಡೆಸಲು ಕಾಲಾವಕಾಶ ನೀಡಬೇಕೆಂದು ಕೋರಿ ರಾಜ್ಯ ಸರ್ಕಾರ ಇಂದು ಸ್ಪೆಶಲ್ ಲೀವ್ ಪಿಟಿಷನ್(ಎಸ್‌ಎಲ್‌ಪಿ) ಅನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಮೂಲಕ ಚುನಾವಣೆ ಮುಂದೂಡುವ ಕಸರತ್ತಿಗೆ ಮುಂದಾಗಿದೆ.
ಕಾನೂನು ಸಮರಕ್ಕೆ ಕಾರಣವಾಗಿದ್ದ ಬಿಬಿಎಂಪಿ ಚುನಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಇತ್ತೀಚೆಗಷ್ಟೇ, ಮಾರ್ಚ್ 30ರೊಳಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿತ್ತು.
ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡುವ ಹುನ್ನಾರ ನಡೆಸುತ್ತಿರುವ ಬಗ್ಗೆ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ, ಈ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಕನಿಷ್ಠ ಆರು ತಿಂಗಳ ಕಾಲ ಕಾಲಾವಕಾಶ ನೀಡಬೇಕೆಂದು ಕೋರಿ ಮನವಿ ಸಲ್ಲಿಸಿತ್ತು. ಸರ್ಕಾರದ ಮನವಿಯನ್ನು ಪರಿಶೀಲಿಸಿದ್ದ ಹೈಕೋರ್ಟ್, ಅರ್ಜಿಯನ್ನು ತಿರಸ್ಕರಿಸಿ ಮಾ.30ರೊಳಗೆ ಚುನಾವಣೆ ನಡೆಸುವಂತೆ ಅಂತಿಮ ತೀರ್ಪು ನೀಡಿತ್ತು.
ಹೈಕೋರ್ಟ್ ತೀರ್ಪಿನ ನಂತರ, ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದರು. ಅದೇ ರೀತಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಕೂಡ ಚುನಾವಣೆ ನಡೆಸುವುದು ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯ ಸರ್ಕಾರ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ.