ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಕುರಿತಂತೆ ಕಾಂಗ್ರೆಸ್, ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ, ಗೋ ಹತ್ಯೆ ನಿಷೇಧಿಸುವುದರಲ್ಲಿ ತಪ್ಪೇನಿಲ್ಲ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಗೋವುಗಳ ಬಗ್ಗೆ ಹಿಂದೂಗಳು ಪೂಜ್ಯನೀಯ ಭಾವ ಹೊಂದಿದ್ದಾರೆ. ಸಾರ್ವತ್ರಿಕವಾಗಿ ವಿರೋಧ ವ್ಯಕ್ತವಾಗುತ್ತದೆ ಎಂದಾದ ಮೇಲೆ ಗೋ ಹತ್ಯೆ ನಿಷೇಧಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು. ಅಲ್ಲದೇ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರುಗಳು ರಾಜ್ಯದ ಆಸ್ತಿಯನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದರು.
ಮುಖ್ಯಮಂತ್ರಿಗಳು ಕೇವಲ ಪೇಪರ್ ಹುಲಿ ಎಂದು ವಾಗ್ದಾಳಿ ನಡೆಸಿದ ಬಂಗಾರಪ್ಪ, ರಾಮಚಂದ್ರಾಪುರ ಮಠದಿಂದ ನೂರಾರು ಎಕರೆ ಭೂಮಿ ಕಬಳಿಯಾಗುತ್ತಿದೆ. ಆದರೂ ಸರ್ಕಾರ ಅದಕ್ಕೆಲ್ಲಾ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.