76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗದಗ ನಗರಿ ಸಜ್ಜುಗೊಂಡಿದ್ದು, ಫೆ.19,20 ಹಾಗೂ 21ರಂದು ನಡೆಯುವ ಸಮ್ಮೇಳನದ ಯಶಸ್ಸಿಗಾಗಿ ಭರದ ಸಿದ್ದತೆ ನಡೆಯುತ್ತಿದೆ.
ವಿದ್ಯಾದಾನ ಸಮಿತಿ ಪದವಿ ಪೂರ್ವ ಕಾಲೇಜಿನ ಮೈದಾನದ ಆವರಣದಲ್ಲಿ ನಿರ್ಮಿಸಲಾಗಿರುವ ಮಹಾ ಮಂಟಪಕ್ಕೆ ಕುಮಾರವ್ಯಾಸ ಎಂದು ಹೆಸರಿಡಲಾಗಿದೆ. ಸಮ್ಮೇಳನವು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಧಾನ ವೇದಿಕೆಯಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಕೆ.ನಲ್ಲೂರು ಪ್ರಸಾದ್ ತಿಳಿಸಿದರು.
ನೆರೆ ಹಾವಳಿ ಪರಿಣಾಮದಿಂದಾಗಿ ಈ ಬಾರಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಸರಳವಾಗಿ ನಡೆಸಲು ಕಪಾಪ ನಿರ್ಧರಿಸಿರುವುದಾಗಿ ಹೇಳಿದರು. ಪೂರ್ಣಕುಂಭ ಸ್ವಾಗತದೊಂದಿಗೆ ಸಮ್ಮೇಳಾಧ್ಯಕ್ಷರಾದ ಡಾ.ಗೀತಾ ನಾಗಭೂಷಣ ಅವರನ್ನು ಬರಮಾಡಿಕೊಳ್ಳಲಾಗುವುದು ಎಂದರು.
ಸಮ್ಮೇಳನಕ್ಕೆ ಎಂದಿನಂತೆ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ 50ಲಕ್ಷ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಲಾಗಿದೆ. ಗದಗ ಜಿಲ್ಲಾ ಸರ್ಕಾರಿ ನೌಕರರು ಒಂದು ತಿಂಗಳ ವೇತನವನ್ನು ನೀಡಿದ್ದಾರೆ.